ಉ.ಪ್ರ. ಚುನಾವಣೆ: 107 ಅಭ್ಯರ್ಥಿಗಳ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ
ಗೋರಖ್ಪುರದಿಂದ ಆದಿತ್ಯನಾಥ್ ಸ್ಪರ್ಧೆ

ಹೊಸದಿಲ್ಲಿ, ಜ.15: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ತನ್ನ 107 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಸಿರುವ ಬಿಜೆಪಿ, ಭಾರೀ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಆದಿತ್ಯನಾಥ ಅವರು ಗೋರಖ್ಪುರ ನಗರ ಮತ್ತು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರು ಪ್ರಯಾಗರಾಜ್ ನ ಸಿರಾಥು ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ.
ಯೋಗಿ ಮತ್ತು ಮೌರ್ಯ ಅವರನ್ನು ಹೊರತುಪಡಿಸಿ ಇತರ ಎಲ್ಲ ಹೆಸರುಗಳು ಫೆ.10 ಮತ್ತು 14ರಂದು ಮೊದಲ ಎರಡು ಹಂತಗಳಲ್ಲಿ ಮತದಾನ ನಡೆಯಲಿರುವ 113 ಕ್ಷೇತ್ರಗಳ ಪೈಕಿ 105 ಕ್ಷೇತ್ರಗಳಿಗಾಗಿವೆ. ಈ ಪೈಕಿ 44 ಅಭ್ಯರ್ಥಿಗಳು ಒಬಿಸಿ, 19 ಅಭ್ಯರ್ಥಿಗಳು ಪರಿಶಿಷ್ಟ ಜಾತಿಗಳಿಗೆ ಸೇರಿದ್ದು,ಇದು ಒಟ್ಟು ಅಭ್ಯರ್ಥಿಗಳ ಶೇ.60ರಷ್ಟಿದೆ. ಸುರೇಶ್ ಖನ್ನಾ, ಸುರೇಶ್ ರಾಣಾ ಮತ್ತು ಶ್ರೀಕಾಂತ ಶರ್ಮಾರಂತಹ ಸಚಿವರು ಸೇರಿದಂತೆ 63 ಹಾಲಿ ಶಾಸಕರು ಪಟ್ಟಿಯಲ್ಲಿದ್ದು,20 ಕ್ಷೇತ್ರಗಳಲ್ಲಿ ಇತರರಿಗೆ ಅವಕಾಶ ನೀಡಲಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಉತ್ತರಾಖಂಡದ ಮಾಜಿ ರಾಜ್ಯಪಾಲರು ಮತ್ತು ಹಾಲಿ ಬಿಜೆಪಿ ಉಪಾಧ್ಯಕ್ಷೆಯಾಗಿರುವ ದಲಿತ ನಾಯಕಿ ಬೇಬಿ ರಾಣಿ ಮೌರ್ಯ ಅವರನ್ನು ಆಗ್ರಾ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ಪಂಕಜ್ ಸಿಂಗ್ ಅವರು ನೊಯ್ಡ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ.
ಆದಿತ್ಯನಾಥರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಬಹುದು ಎಂಬ ಊಹಾಪೋಹವಿತ್ತಾದರೂ ಪ್ರಧಾನ್ ಅವರು, ಸತತ ಐದು ಅವಧಿಗಳಿಗೆ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ಆದಿತ್ಯನಾಥರ ಸಾಂಪ್ರದಾಯಿಕ ಕ್ಷೇತ್ರ ಗೋರಖ್ಪುರದಿಂದಲೇ ಅವರನ್ನು ಕಣಕ್ಕಿಳಿಸಲು ಪಕ್ಷವು ನಿರ್ಧರಿಸಿದೆ ಎಂದು ತಿಳಿಸಿದರು. ಆದಿತ್ಯನಾಥ್ ಇದೇ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.
ಆದಿತ್ಯನಾಥ್ ರಾಜ್ಯದ 403 ಕ್ಷೇತ್ರಗಳ ಪೈಕಿ ಎಲ್ಲಿಂದಲೇ ಆದರೂ ಸ್ಪರ್ಧಿಸಲು ಸಿದ್ಧರಿದ್ದರು ಎಂದು ಪ್ರಧಾನ್ ತಿಳಿಸಿದರು. ಮೊದಲ ಎರಡು ಹಂತಗಳಲ್ಲಿ ಜಾಟ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ಮತದಾನ ನಡೆಯಲಿದ್ದು,ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ರೈತ ಸಮುದಾಯವು 16 ಸ್ಥಾನಗಳನ್ನು ಪಡೆದಿದೆ ಎಂದು ಮೂಲಗಳು ತಿಳಿಸಿದವು.
ಬಿಜೆಪಿಯು ಕಣಕ್ಕಳಿಸಿರುವ ಸಾಮಾನ್ಯ ವರ್ಗದ 43 ಅಭ್ಯರ್ಥಿಗಳಲ್ಲಿ 18 ಜನರು ಠಾಕೂರ್, 10 ಬ್ರಾಹ್ಮಣ ಮತ್ತು ಎಂಟು ಜನರು ವೈಶ್ಯ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.
ಬಿಜೆಪಿಯ ಮೊದಲ ಪಟ್ಟಿಯಲ್ಲಿನ 19 ಎಸ್ಸಿ ಅಭ್ಯರ್ಥಿಗಳ ಪೈಕಿ 13 ಜನರು ಒಟ್ಟು ದಲಿತ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿರುವ ಜಾಟವ್ ಸಮುದಾಯಕ್ಕೆ ಸೇರಿದ್ದಾರೆ.







