ವಿಭಿನ್ನ ಶೈಲಿಯ ಬೌಲಿಂಗ್ ನಿಂದ ಆಸ್ಟ್ರೇಲಿಯಾ ತಂಡದಲ್ಲಿ ಮಿಂಚುತ್ತಿರುವ ತಮಿಳುನಾಡಿನ ನಿವೇದನ್ ರಾಧಾಕೃಷ್ಣನ್ !

ನಿವೇತನ್ ರಾಧಾಕೃಷ್ಣನ್ (Photo: Twitter/@deva_prakash7)
ಮೆಲ್ಬೋರ್ನ್: 14 ನೇ ಆವೃತ್ತಿಯ ಅಂಡರ್-19 ಕ್ರಿಕೆಟ್ ವಿಶ್ವಕಪ್ ಶುಕ್ರವಾರ ಕೆರಿಬಿಯನ್ ನಾಡಿನಲ್ಲಿ ಆರಂಭವಾಯಿತು. ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಆತಿಥೇಯ ವೆಸ್ಟ್ ಇಂಡೀಸ್ ಅನ್ನು ಸೋಲಿಸಿದರೆ, ಇತರ 'ಡಿ' ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ಶಿಶು ಸ್ಕಾಟ್ಲೆಂಡ್ ಅನ್ನು ಸೋಲಿಸಿತು. ಆದಾಗ್ಯೂ, ವಿಂಡೀಸ್ ವಿರುದ್ಧ ಆಸ್ಟ್ರೇಲಿಯಾದ ಗೆಲುವಿನ ಸಮಯದಲ್ಲಿ ಆಲ್ ರೌಂಡರ್ ನಿವೇತನ್ ರಾಧಾಕೃಷ್ಣನ್ ತನ್ನ ಪ್ರದರ್ಶನ ಹಾಗೂ ವಿಶಿಷ್ಟ ಬೌಲಿಂಗ್ ಶೈಲಿ ಮೂಲಕ ಎಲ್ಲರ ಗಮನ ಸೆಳೆದರು.
19 ವರ್ಷ ವಯಸ್ಸಿನ ರಾಧಾಕೃಷ್ಣನ್ ಅವರು ಎಡ ಅಥವಾ ಬಲಗೈ ನಲ್ಲಿ ಚೆನ್ನಾಗಿ ಬ್ಯಾಟ್ ಅಥವಾ ಬೌಲ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ರಾಧಾಕೃಷ್ಣನ್ ಭಾರತದ ಚೆನ್ನೈನಲ್ಲಿ ಜನಿಸಿದ್ದರು. ಅವರು ಕೇವಲ 10 ವರ್ಷದವರಾಗಿದ್ದಾಗ ಅವರ ಕುಟುಂಬ ಆಸ್ಟ್ರೇಲಿಯಾಕ್ಕೆ ತೆರಳಿತ್ತು.
ರಾಧಾಕೃಷ್ಣನ್ ಸಿಡ್ನಿಯಲ್ಲಿ ಬೆಳೆದರೂ ಅವರು ಟ್ಯಾಸ್ಮೆನಿಯಾದೊಂದಿಗೆ ತಮ್ಮ ಮೊದಲ ವೃತ್ತಿಪರ ಒಪ್ಪಂದವನ್ನು ಗಿಟ್ಟಿಸಿಕೊಂಡರು. ಇತ್ತೀಚೆಗೆ, ರಾಧಾಕೃಷ್ಣನ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಸಂದರ್ಶನವನ್ನು ನೀಡಿದರು. ಅಲ್ಲಿ ಅವರು ತಮ್ಮ ಎರಡೂ ಕೈಗಳಿಂದ ಬೌಲಿಂಗ್ ಮಾಡಿದರೆ ಆಗುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು.
ಬ್ಯಾಟರ್ಗಳು ಅಂಪೈರ್ಗೆ ಹೇಳದೆ ಸ್ವಿಚ್-ಹಿಟ್ ಹಾಗೂ ರಿವರ್ಸ್ ಸ್ವೀಪ್ ಆಡಬಹುದಾದ್ದರಿಂದ ಅಂಪೈರ್ಗೆ ತಿಳಿಸದೆ ತನಗೂ ಸ್ವಿಚ್ ಮಾಡಲು ಅವಕಾಶ ನೀಡಬೇಕು ಎಂದು ರಾಧಾಕೃಷ್ಣನ್ ಒತ್ತಾಯಿಸಿದರು.
ಶುಕ್ರವಾರದಂದು ರಾಧಾಕೃಷ್ಣನ್ ಆಸ್ಟ್ರೇಲಿಯದ ಪರ 31 ರನ್ಗಳ ಪ್ರಮುಖ ಕಾಣಿಕೆ ನೀಡಿದ್ದಲ್ಲದೆ ಮೂರು ವಿಕೆಟ್ಗಳನ್ನು ಪಡೆದಿದ್ದರು.
ಆಸ್ಟ್ರೇಲಿಯಾ ಈಗ ಜನವರಿ 17 ಸೋಮವಾರದಂದು ತನ್ನ ಮುಂದಿನ ಅಂಡರ್-19 ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.