ಎರಡನೇ ವಾರದ ವಿಕೇಂಡ್ ಕರ್ಫ್ಯೂ: ಉಡುಪಿಯಲ್ಲಿ ಜನ ಸಂಚಾರ ಸಾಮಾನ್ಯ

ಉಡುಪಿ, ಜ.15: ಎರಡನೇ ವಾರದ ವಿಕೇಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ಅಂಗಡಿಗಳು ಹೊರತು ಪಡಿಸಿ ಉಳಿದ ಬಹುತೇಕ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು. ಸಾರಿಗೆ ವ್ಯವಸ್ಥೆಯಿಂದಾಗಿ ಜನ ಸಂಚಾರ ಮಾತ್ರ ಸಾಮಾನ್ಯವಾಗಿರುವುದು ಕಂಡುಬಂತು.
ಕುಂದಾಪುರ, ಕಾರ್ಕಳ, ಕಾಪು, ಬ್ರಹ್ಮಾವರ, ಬೈಂದೂರು, ಹೆಬ್ರಿ, ಉಡುಪಿ ತಾಲೂಕುಗಳಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಸರ್ವಿಸ್, ಸಿಟಿ ಹಾಗೂ ಸರಕಾರಿ ಬಸ್‌ಗಳು ಎಂದಿನಂತೆ ಓಡಾಟ ನಡೆಸಿದ್ದವು. ರಿಕ್ಷಾ, ಟ್ಯಾಕ್ಸಿಗಳ ಸಂಚಾರ ಕೂಡ ಇದ್ದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯ ವಸ್ತು ಗಳ ಸಾಗಾಟದ ಲಾರಿಗಳು ಹೊರತು ಪಡಿಸಿ ಖಾಸಗಿ ವಾಹನಗಳ ಓಡಾಟ ಕಡಿಮೆ ಇತ್ತು.
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಕೃಷ್ಣಾಪುರ ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ. ಆದರೆ ಉಡುಪಿ ಕೃಷ್ಣ ಮಠದ ರಥಭೀದಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕರ್ಫ್ಯೂ ಹಿನ್ನೆಲೆಯಲ್ಲಿ ಯಾವುದೇ ಹೆಚ್ಚಿನ ಪೊಲೀಸ್ ಭದ್ರತೆಗಳು ಎಲ್ಲೂ ಕಂಡುಬಂದಿಲ್ಲ. ಚೆಕ್‌ಪೋಸ್ಟ್‌ಗಳಲ್ಲೂ ವಾಹನಗಳ ತಪಾಸಣೆ ಇರಲಿಲ್ಲ.
