ತುರ್ತು ಚಿಕಿತ್ಸೆಯ ಅಗತ್ಯ ಇರುವವರು ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ: ಆರೋಗ್ಯ ಇಲಾಖೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.15: ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತುರ್ತು ಚಿಕ್ಸಿತೆಯ ಅಗತ್ಯ ಇರುವವರು ಮಾತ್ರ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ಭೇಟಿ ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಅಲ್ಲದೇ, ಸಾಮಾನ್ಯ ಆರೋಗ್ಯ ಸಮಸ್ಯೆ ಇರುವವರು, ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯಬಹುದಾದ ಹಾಗೂ ದಂತ ಸಮಸ್ಯೆ ಸಂಬಂಧಿ ಚಿಕಿತ್ಸೆ ಪಡೆಯುವವರು ಮುಂದಿನ ಎರಡು ವಾರಗಳ ಕಾಲ ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳು ಈ ಸೂಚನೆಯನ್ನು ಪಾಲಿಸುವಂತೆ ತಿಳಿಸಲಾಗಿದೆ.
ಹೋಂ ಐಸೋಲೇಷನ್: ಕೋವಿಡ್ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಗಂಟಲು ದ್ರವದ ಪರೀಕ್ಷೆ ಕೊಟ್ಟಿರುವ ವ್ಯಕ್ತಿ, ಲ್ಯಾಬ್ನಿಂದ ಫಲಿತಾಂಶ ಬರುವವರೆಗೆ ಮನೆಯಲ್ಲೆ ಕ್ವಾರಂಟೈನ್ ಆಗಿರಬೇಕು.
ಒಂದು ವೇಳೆ ಯಾರಾದರೂ ಕೆಲಸಕ್ಕೆ ಹೋಗುವುದು, ಸಮುದಾಯದ ಜೊತೆ ಬೆರೆಯುವ ಮೂಲಕ ಬೇಜವಾಬ್ದಾರಿ ನಡವಳಿಕೆ ಅನುಸರಿಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಸಾಂಕ್ರಾಮಿಕ ವಿಕೋಪ ತಡೆ ಕಾನೂನು ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.







