125 ಕೋಟಿ ರೂ. ವಂಚನೆ ಪ್ರಕರಣ: ಬಿಎಸ್ಎಫ್ ಅಧಿಕಾರಿ ಬಂಧನ
14 ಕೋಟಿ ರೂ., ಐಶಾರಾಮಿ ಕಾರು ಸಹಿತ ಅಕ್ರಮ ಸಂಪತ್ತು ವಶ
ಫೋಟೊ ಕೃಪೆ: NDTV
ಗುರ್ಗಾಂವ್, ಜ.16 : ಐಪಿಎಸ್ ಅಧಿಕಾರಿಯೆಂಬ ಸೋಗಿನಲ್ಲಿ ಜನರಿಗೆ 125 ಕೋಟಿ ರೂ. ವಂಚಿಸಿದ ಗಡಿಭದ್ರತಾ ಪಜೆಯ ಅಧಿಕಾರಿಯನ್ನು ಹರ್ಯಾಣ ಪೊಲೀಸರು ರವಿವಾರ ಬಂಧಿಸಿದ್ದಾರೆ. ಆತನಿಂದ ಏಳು ಐಶಾರಾಮಿ ಕಾರುಗಳು, 14 ಕೋಟಿ ರೂ. ನಗದು ಮತ್ತು 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಭಾರೀ ಪ್ರಮಾಣದ ಅಕ್ರಮ ಸಂಪತ್ತನ್ನು ವಶಪಡಿಸಿಕೊಂಡಿದ್ದಾರೆ.
ಗುರ್ಗಾಂವ್ನ ಮಾನೆಸರ್ನಲ್ಲಿರುವ ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ) ಮುಖ್ಯ ಕಾರ್ಯಾಲಯದಲ್ಲಿ ನಿಯೋಜಿತನಾಗಿರುವ ಬಿಎಸ್ಎಫ್ ಉಪ ಕಮಾಂಡೆಂಚ್ ಪ್ರವೀಣ್ ಯಾದವ್ ಬಂಧಿತ ಆರೋಪಿ. ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಯ ಅಧಿಕಾರಿಯೆಂದು ಸೋಗುಹಾಕಿ ಜನರಿಂದ 125 ಕೋಟಿ ರೂ.ಗೂ ಅಧಿಕ ಹಣವನ್ನು ವಂಚಿಸಿದ್ದಾನೆಂದು ಪೊಲೀಸರು ಆರೋಪಿಸಿದ್ದಾರೆ.
ಆರೋಪಿ ಪ್ರವೀಣ್ ಯಾದವ್ನ ಪತ್ನಿ ಮಮತಾ ಯಾದವ್, ಸಹೋದರಿ ರಿತು ಹಾಗೂ ಇನ್ನೋರ್ವ ಸಹಚರನನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ.
ತಾನೋರ್ವ ಐಪಿಎಸ್ ಅಧಿಕಾರಿಯೆಂದು ಸೋಗುಹಾಕಿಕೊಂಡು, ಯಾದವ್ ಎನ್ಎಸ್ಜಿ ಕಾರ್ಯಾಲಯದ ಆವರಣದಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆಯನ್ನು ಕೊಡಿಸುವುದಾಗಿ ಹೇಳಿಕೊಂಡು ಜನರಿಂದ ನೂರಾರು ಕೋಟಿ ರೂ.ಗಳನ್ನು ವಸೂಲಿ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ವಂಚನೆಯ ಹಣವನ್ನು ಎನ್ಎಸ್ಜಿ ಹೆಸರಿನಲ್ಲಿ ತೆರೆಯಲಾಗಿದ್ದ ನಕಲಿ ಖಾತೆಗೆ ವರ್ಗಾಯಿಸುತ್ತಿದ್ದ. ಬ್ಯಾಂಕೊಂದರಲ್ಲಿ ಮ್ಯಾನೇಜರ್ ಆಗಿರುವ ಆತನ ಸಹೋದರಿ ರಿತು ಯಾದವ್ ಈ ನಕಲಿ ಖಾತೆಯನ್ನು ತೆರೆಯುವುದಕ್ಕೆ ನೆರವಾಗಿದ್ದಳು ಎಂದು ಪೊಲೀಸರು ಆರೋಪಿಸಿದ್ದರು.