ಮುರುಡೇಶ್ವರ ರಥೋತ್ಸವ; ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದ ತಾಲೂಕಾಡಳಿತ
ಭಟ್ಕಳ: ಜ.20 ರಂದು ನಡೆಯುವ ಮುರುಡೇಶ್ವರ ಶ್ರೀಮಾತ್ಹೋಬಾರ ದೇವಸ್ಥಾನದ ರಥೋತ್ಸವ ಕಾರ್ಯಕ್ರಮಕ್ಕೆ ತಾಲೂಕಾಡಳಿತ ನಿರ್ಬಂಧವನ್ನು ವಿಧಿಸಿದೆ.
ಈ ಕುರಿತಂತೆ ಭಟ್ಕಳತ ತಹಶೀಲ್ದಾರರ ಕಚೇರಿಯು ಪತ್ರಿಕಾ ಪ್ರಕಟಣೆ ಜಾರಿಗೊಳಿಸಿದ್ದು, ಜ.20 ರಂದು ನಡೆಯಲಿರುವ ಶ್ರೀಮಾತ್ಹೋಬಾರ ಮುರ್ಡೇಶ್ವರ ದೇವಸ್ಥಾನದ ರಥೋತ್ಸವದಲ್ಲಿ ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳನ್ನು ಮಾತ್ರ ಆಚರಿಸಲಾಗುತ್ತಿದೆ. ಅದೇ ದಿನ ಸಂಜೆ 4 ಗಂಟೆಯಿಂದ 6.30 ರವರೆಗೆ ನಡೆಯಲಿರುವ ರಥೋತ್ಸವದಲ್ಲಿ ಪ್ರಸ್ತುತ ಕೋವಿಡ್ ಮಾರ್ಗಸೂಚಿಯಂತೆ ಸಾರ್ವಜನಿಕರು ಸೇರುವಿಕೆಯನ್ನು ನಿರ್ಬಂಧಿಸಿದ್ದು, ರಥೋತ್ಸವದಲ್ಲಿ ಹಣ್ಣು-ಕಾಯಿ, ರಥಕಾಣಿಕೆ ಎಲ್ಲ ರೀತಿಯ ಸೇವೆಗಳನ್ನು ನಿರ್ಬಂಧಿಸಿದ್ದು, ಧಾರ್ಮಿಕ ವಿಧಿ ವಿಧಾನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ರಥೋತ್ಸವ ನಡೆಯುವ ಸ್ಥಳಕ್ಕೆ ದೇವಸ್ಥಾನ ಸಮಿತಿ ಹಾಗೂ ದೇವಸ್ಥಾನದ ಸೀಮಾ ಸಮಿತಿಯ ಸದಸ್ಯರನ್ನೊಳಗೊಂಡಂತೆ ಪಾಸ್ ಪಡೆದ 200 ಜನರಿಗೆ ಅರ್.ಟಿಪಿಸಿಆರ್ ನೆಗಟಿವ್ ಪ್ರಮಾಣಪತ್ರ ದೃಢಪಡಿಸಿಕೊಂಡು ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಪಾಸ್ ಹೊಂದಿರುವರನ್ನು ಹೊರತು ಪಡಿಸಿ, ಇನ್ನಿತರೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿರುತ್ತದೆ. ಭಕ್ತಾಧಿಗಳಿಗೆ ರಥೋತ್ಸವನ್ನು ಮನೆಯಿಂದ ನೇರ ಪ್ರಸಾರದ ಮೂಲಕ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಿ, ಜನ ಸೇರದಂತೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ತಿಳಿಸಲಾಗಿದೆ.
ಅಲ್ಲದೆ, ರಥೋತ್ಸವದಲ್ಲಿ ಜನರು ಸೇರದಂತೆ ಹಾಗೂ ಸರಕಾರದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಹಾಗೂ ಕೋವಿಡ್ ಸಮುಚ್ಚಿತ ವರ್ತನೆಯನ್ನು ಪಾಲಿಸಿ, ತಾಲೂಕಿನಲ್ಲಿ ಕೋವಿಡ್ ನಿಯಂತ್ರಣ ಮಾಡಲು ಸಾರ್ವಜನಿಕರಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಿದೆ.