ಸರಳ ಪರ್ಯಾಯ ಮೆರವಣಿಗೆ ವೀಕ್ಷಿಸಿದ ಸಹಸ್ರಾರು ಭಕ್ತರು
ಉಡುಪಿ, ಜ.18: ಕೋವಿಡ್ ಭೀತಿ ಹಾಗೂ ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಸರಳ ಮತ್ತು ಸಂಪ್ರದಾಯಿಕ ಪರ್ಯಾಯ ಮಹೋತ್ಸವಕ್ಕೆ ಕರೆ ನೀಡಿದ್ದರೂ ಜ.18ರ ನಸುಕಿನ ವೇಳೆ ನಗರದಲ್ಲಿ ನಡೆದ ಸರಳ ಪರ್ಯಾಯ ಮೆರವಣಿಗೆ ಯನ್ನು ರಸ್ತೆಯ ಇಕ್ಕೆಲಗಳಲ್ಲಿ ನೆರೆದ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಕಣ್ತುಂಬಿಕೊಂಡರು.
ನಗರದ ಜೋಡುಕಟ್ಟೆಯಿಂದ ನಸುಕಿನ ವೇಳೆ 3.43ರ ಸುಮಾರಿಗೆ ಆರಂಭ ಗೊಂಡ ಮೆರವಣಿಗೆ ಕೃಷ್ಣಾಪುರ ಮಠದ ಪಟ್ಟದ ದೇವರು, ಮಠಾಧೀಶರು, ವಿದ್ವಾಂಸರು, ನಾಡಿನ ಗಣ್ಯರು ಹಾಗೂ ಭಕ್ತಾದಿಗಳೊಂದಿಗೆ ವೇದಘೋಷ ಪೂರ್ವಕವಾಗಿ ಕೋರ್ಟ್ ರಸ್ತೆ, ಹಳೆ ಡಯಾನ ಸರ್ಕಲ್, ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗದ ಮೂಲಕ ಸಾಗಿ ಮುಂಜಾನೆ 4.47ಕ್ಕೆ ಶ್ರೀಕೃಷ್ಣ ಮಠದ ರಥಬೀದಿ ತಲುಪಿತು. ಮುಂಜಾನೆ 5:15ರ ಸುಮಾರಿಗೆ ಮೆರವಣಿಗೆ ಮುಕ್ತಾಯಗೊಂಡಿತು.
ಟ್ಯಾಬ್ಲೋಗಳ ಸಂಖ್ಯೆ ಇಳಿಕೆ: ಸರಳ ಮೆರವಣಿಗೆಯಲ್ಲಿ ಹಿನ್ನೆಲೆಯಲ್ಲಿ 40ರಷ್ಟು ನಿಗದಿಪಡಿಸಿದ್ದ ಟ್ಯಾಬ್ಲೋ ಕಲಾತಂಡಗಳನ್ನು ಇಳಿಕೆ ಮಾಡಲಾಗಿತ್ತು. ಸುಮಾರು 10 ಟ್ಯಾಬ್ಲೋಗಳು ಮತ್ತು ಯಕ್ಷಗಾನ ಕಲಾತಂಡ, ಕೊರಗರ ಡೋಲು ವಾದನ, ಭಜನಾ ತಂಡಗಳು, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತಂಡಗಳಿದ್ದವು. ಉಳಿದಂತೆ ಎಲ್ಲ ಕಲಾತಂಡಗಳನ್ನು ರದ್ದುೊಳಿಸಲಾಗಿತ್ತು.
ಕಡೆಗೋಲು ಕೃಷ್ಣನ ಮೂರ್ತಿ, ಸುವರ್ಣ ಪಲ್ಲಕ್ಕಿಯಲ್ಲಿ ಕೃಷ್ಣಾಪುರ ಮಠದ ಪಟ್ಟದ ದೇವರು, ಬಳಿಕ ವಾಹನಗಳ ಮೇಲೆ ಇರಿಸಿದ ಮೇನೆಯಲ್ಲಿ ಕುಳಿತ ಕೃಷ್ಣಾಪುರ, ಪಲಿಮಾರು, ಪೇಜಾವರ, ಕಾಣಿಯೂರು, ಸೋದೆ, ಪಲಿಮಾರು ಕಿರಿಯ ಹಾಗೂ ಶಿರೂರು ಸ್ವಾಮೀಜಿಗಳು ಮೆರವಣಿಗೆಯಲ್ಲಿ ಸಾಗಿಬಂದರು. ಇದರಲ್ಲಿ ಭತ್ತದ ತೆನೆಯಿಂದ ಶೃಂಗಾರಗೊಂಡ ಪೇಜಾವರ ಸ್ವಾಮೀಜಿಯ ಮೇನೆ ಆಕರ್ಷಣೀಯವಾಗಿತ್ತು.
ಹಿಂದೆ ಯಕ್ಷಗಾನ, ಕಾಳಿಂಗ ಮರ್ದನ, ಶೇಷಶಯನ, ಗಜೇಂದ್ರ ಮೋಕ್ಷ, ಜಾಂಬವಂತ- ಕೃಷ್ಣ, ಗೀತೋಪದೇಶ ಕೃಷ್ಣಾರ್ಜುನ, ವಸುದೇವ ಕೃಷ್ಣ, ಅಯೋಧ್ಯೆ ಹಾಗೂ ಅರಣ್ಯ ಇಲಾಖೆಯ ಹಸಿರು ಉಸಿರು ್ಯಾಬ್ಲೋಗಳು ಗಮನ ಸೆಳೆದವು.
ನಿಯಂತ್ರಣಕ್ಕೆ ಬಾರದ ಜನ: ಸರಳ ಪರ್ಯಾಯೋತ್ಸವ ಮತ್ತು ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10ಗಂಟೆಯಿಂದ ಅಂಗಡಿ ಮುಗ್ಗಟ್ಟು, ಬೀದಿಬದಿ ವ್ಯಾಪಾರ, ಸಂತೆ ಮತ್ತು ಜನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಉಡುಪಿ ನಗರಸಭೆಯಿಂದ ನ.17ರ ಮಧ್ಯಾಹ್ನದಿಂದ ವಾಹನಗಳಲ್ಲಿ ಧ್ವನಿ ವರ್ಧಕ ಮೂಲಕ ನಗರಾಧ್ಯಂತ ಸೂಚನೆಗಳನ್ನು ನೀಡಲಾಗಿತ್ತು.
ಆದರೆ ಇದನ್ನು ಲೆಕ್ಕಿಸದೆ ರಥಬೀದಿ ಹಾಗೂ ಸುತ್ತಮುತ್ತಲಿನ ರಸ್ತೆ, ಕೆಎಂ ಮಾರ್ಗ, ಕೋರ್ಟ್ ರಸ್ತೆ, ಜೋಡುಕಟ್ಟೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಾತ್ರಿ 10ಗಂಟೆಯ ನಂತರವೂ ಜಮಾಯಿಸಿದ್ದರು ಮತ್ತು ತಿರುಗಾಡುತ್ತಿದ್ದರು. ಅದೇ ರೀತಿ ರಾತ್ರಿ ವೇಳೆ ನಗರದಲ್ಲಿ ವಾಹನ ಸಂಚಾರ ನಿರ್ಬಂಧ ವಿಧಿಸಿದ್ದರೂ ಜ.18ರ ಬೆಳಗಿನ ಜಾವ ವರೆಗೂ ವಾಹನಗಳು ಜನ ತುಂಬಿದ ರಸ್ತೆಯಲ್ಲೂ ಓಡಾಡುತ್ತಿರುವುದು ಕಂಡು ಬಂತು.
ಮೆರವಣಿಗೆಯಲ್ಲಿ ಶಾಸಕ ಕೆ.ರಘುಪತಿ ಭಟ್, ಸಮಿತಿ ಪದಾಧಿಕಾರಿ, ನಗರ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ನಗರಸಭೆ ಸದಸ್ಯರು ಹಾಜರಿದ್ದರು. ಪರ್ಯಾಯ ಮಹೋತ್ಸವ ಹಾಗೂ ಮೆರವಣಿಗೆ ಹಿನ್ನೆಲೆಯಲ್ಲಿ ನಗರಾದ್ಯಂತ ಸಾವಿರಾರು ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಪೌರ ಕಾರ್ಮಿಕರಿಂದ ಉಡುಪಿ ನಗರ ಸ್ವಚ್ಛ!
ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದ ಪರ್ಯಾಯ ಮಹೋತ್ಸವದ ಮೆರವಣಿಗೆ ಮುಗಿಯುತ್ತಿದ್ದಂತೆ ಉಡುಪಿ ನಗರ ಸಭೆಯ ಪೌರ ಕಾರ್ಮಿಕರು ರಸ್ತೆಗಿಳಿದು ಕೆಲವೇ ಗಂಟೆಯೊಳಗೆ ಇಡೀ ನಗರವನ್ನು ್ವಚ್ಛಗೊಳಿಸುವ ಕಾರ್ಯ ಮಾಡಿದರು.
ಜ.17ರ ಬೆಳಗ್ಗೆಯಿಂದ ನಗರದಲ್ಲಿ ಸೇರಿದ ಜನ ಜಾತ್ರೆಯಿಂದ ಎಲ್ಲೆಡೆ ಕಸಗಳು ತುಂಬಿ ಹೋಗಿದ್ದವು. ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ಮೆರವಣಿಗೆ ಸಾಗಿ ಬರುವ ಮಾರ್ಗ ಹೊರತು ಪಡಿಸಿ ಉಳಿದ ರಸ್ತೆಗಳಲ್ಲಿ ಜನ ಖಾಲಿಯಾಗುತ್ತಿದ್ದಂತೆ 100 ಗುತ್ತಿಗೆ ಆಧಾರಿತ ಮತ್ತು 140 ಉಡುಪಿ ನಗರಸಭೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಬಳಿಕ ಮೆರವಣಿಗೆ ಸಾಗಿ ಬರುತ್ತಿದ್ದಂತೆ ಕೊನೆಯಲ್ಲಿ ಪೊರಕೆ ಹಿಡಿದುಕೊಂಡು ರಸ್ತೆಗಿಳಿದ ಒಟ್ಟು ಪೌರ ಕಾರ್ಮಿಕರು ರಸ್ತೆಯುದ್ದಕ್ಕೂ ಬಿದ್ದ ಕಸವನ್ನು ಶುಚಿಗೊಳಿಸುವ ಕಾರ್ಯ ನಡೆಸಿದರು. ಅಲ್ಲದೆ ಕ್ಷಣಾರ್ಧದಲ್ಲಿ ಇಡೀ ನಗರವನ್ನೇ ಈ ತಂಡ ಸ್ವಚ್ಛಗೊಳಿಸಿತು.