ಸುಳ್ಳು ಹೇಳುತ್ತಿರುವ ಸಂಸ್ಕೃತಿ ಸಚಿವರು: ಸಿಪಿಎಂ ಟೀಕೆ
ಉಡುಪಿ, ಜ.18: ಗಣರಾಜ್ಯೋತ್ಸವ ಪೆರೇಡ್ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನ ಕುರಿತು ಕೇಂದ್ರ ಬಿಜೆಪಿ ಸರಕಾರದ ನಡೆಯನ್ನು ಸಮರ್ಥಿ ಸುವ ಮೂಲಕ ರಾಜ್ಯ ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸುನೀಲ್ ಕುಮಾರ್ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಆರೋಪಿಸಿದೆ.
ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗವಹಿಸಲು ರಾಜ್ಯಗಳಿಗೆ 3 ವರ್ಷಗಳಿ ಗೊಮ್ಮೆ ಮಾತ್ರ ಅವಕಾಶ ಇರುತ್ತದೆ ಎಂದು ಸಚಿವರು ಹೇಳಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಹಿಂದಿನ 12 ವರ್ಷಗಳಲ್ಲಿ ಪ್ರತಿ ವರ್ಷ ಕರ್ನಾಟಕದ ಟ್ಯಾಬ್ಲೋ ಪ್ರದರ್ಶಿತವಾಗಿದ್ದು ಈ ಬಾರಿ 13ನೆ ಬಾರಿಗೆ ಪ್ರದರ್ಶಿತಗೊಳ್ಳುತ್ತಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಒಂದು ರಾಜ್ಯಕ್ಕೆ 3 ವರ್ಷಕ್ಕೊಮ್ಮೆ ಅವಕಾಶ ನೀಡಲಾಗುತ್ತಿದೆ ಎಂಬ ಸುನೀಲ್ ಕುಮಾರ್ ಹೇಳಿಕೆ ಅಪ್ಪಟ ಸುಳ್ಳು ಎಂದು ಸಾಬೀತಾಗಿದೆ ಎಂದು ಅವರು ಟೀಕಿಸಿದರು.
ರಾಜಕೀಯ ಮಧ್ಯಪ್ರವೇಶ ಹಾಗೂ ಆರ್ಎಸ್ಎಸ್ ಅಜೆಂಡಾದ ಭಾಗವಾಗಿ ಕೇರಳ ಸರಕಾರದ ಟ್ಯಾಬ್ಲೋವನ್ನು ತಿರಸ್ಕರಿಸಲಾಗಿದೆ. ಬಿಜೆಪಿಯ ಮೂವರು ಮುಖಂಡರಾದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಷ್ಟೀಯ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಸಚಿವ ಸುನೀಲ್ ಕುಮಾರ್ ಕೇಂದ್ರ ಸರಕಾರವನ್ನು ಸಮರ್ಥಿಸುವ ಭರದಲ್ಲಿ ಭಿನ್ನ ಹೇಳಿಕೆ ನೀಡುತ್ತಿದ್ದಾರೆ. ತಿರುವನಂತಪುರದಲ್ಲಿರುವ ನಾರಾಯಣ ಗುರು ಮಠದವರು ಕೂಡಾ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿದ್ದಾರೆ. ಅವರೇನೂ ಕ್ಯುೂನಿಸ್ಟ್ ಅಲ್ಲ ಎಂದು ಸಿಪಿಎಂ ತಿಳಿಸಿದೆ.
ಸಂಸ್ಕೃತಿ ಸಚಿವರು ಸಮರ್ಥನೆಗಾಗಿ ಸುಳ್ಳು ಹೇಳುವುದರ ಬದಲಾಗಿ ನಿಜವಾಗಿಯೂ ನಾರಾಯಣ ಗುರುಗಳ ಅನುಯಾಯಿ ಆಗಿದ್ದಲ್ಲಿ, ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿ ಕೇರಳ ಸರಕಾರ ತಿಳಿಸಿದಂತೆ, ಮೊದಲು ಆಯ್ಕೆ ಸಮಿತಿ ಒಪ್ಪಿದ ಪ್ರಕಾರ, ಪ್ರಥಮದಲ್ಲಿ ನಾರಾಯಣ ಗುರುಗಳ ಸ್ಥಬ್ಧ ಚಿತ್ರಕ್ಕೆ ಅನುವು ಮಾಡಿಕೊಡ ಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.