ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ
ಉಡುಪಿ, ಜ.19: ಮಾನಸಿಕ ಖಿನ್ನತೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿರುವ ಘಟನೆ ಜ.18ರಂದು ರಾತ್ರಿ ವೇಳೆ ಮಲ್ಪೆಯಲ್ಲಿ ನಡೆದಿದೆ.
ರಕ್ಷಿಸಲ್ಪಟ್ಟ 30ರ ಹರೆಯದ ಅವಿವಾಹಿತೆ ಮಹಿಳೆಯನ್ನು ವಿಶು ಶೆಟ್ಟಿ ಹಿರಿಯ ಸಾಮಾಜಿಕ ಕಾರ್ಯಕರ್ತೆ ಐರಿನ್ ಅಂದ್ರಾದೆ ಸಹಾಯದಿಂದ ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಮಹಿಳೆಯು ಕೋಟ ಠಾಣಾ ವ್ಯಾಪ್ತಿಯ ಇವರ ತಂದೆ ತಾಯಿ ತೀರಿ ಹೋಗಿದ್ದು, ಒಂಟಿಯಾಗಿ ವಾಸಿಸುತ್ತಿದ್ದಾರೆ. ತಾನು ಮಾನಸಿಕವಾಗಿ ಬಹಳಷ್ಟು ನೊಂದಿದ್ದೇನೆ, ಬದುಕು ಹಿಂಸೆಯಾಗಿದೆ, ನಾನು ಮರಳಿ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ವಿಷಯ ತಿಳಿದ ವಿಶು ಶೆಟ್ಟಿ ಸಹಾಯಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಲು ಕಾನೂನು ಪ್ರಕ್ರಿಯೆ ಬಹಳ ವಿಳಂಬವಾದರೂ ನಡೆಯದ ಕಾರಣ ಕೊನೆಗೆ ಕಾನೂನು ಪ್ರಾಧಿಕಾರದ ನ್ಯಾಯಧೀಶೆ ಶರ್ಮಿಳಾ ಅವರಿಗೆ ನಡೆದ ವಿಚಾರ ತಿಳಿಸಿ, ಆಸ್ಪತ್ರೆಗೆ ದಾಖಲಿಸುವಂತಾಯಿತು. ರಾಜ್ಯ ಮಹಿಳಾ ಸಹಾಯವಾಣಿಗೆ ಮಹಿಳೆಯ ಮುಂದಿನ ರಕ್ಷಣೆ ಹಾಗೂ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ವಿಶು ಶೆಟ್ಟಿ ಒತ್ತಾಯಿಸಿದ್ದಾರೆ.