ಸ್ಕಾರ್ಫ್ ವಿವಾದ; ಉಡುಪಿ ಜಿಲ್ಲಾಧಿಕಾರಿ ಸೂಚನೆಯಂತೆ ಎಸಿಯಿಂದ ಸಭೆ
ಫೈಲ್ ಫೋಟೊ
ಉಡುಪಿ, ಜ.19: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿರುವ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿನ ಸ್ಕಾರ್ಫ್ ವಿವಾದ ಇನ್ನೂ ಬಗೆಹರಿದಿಲ್ಲ. ಈ ಸಂಬಂಧ ಸಭೆ ನಡೆಸಿ ಪರಿಶೀಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಕುಂದಾಪುರ ಉಪವಿಭಾಗದ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಅದರಂತೆ ಇಂದು ಕುಂದಾಪುರ ಉಪ ವಿಭಾಗದ ಆಯುಕ್ತ ರಾಜು, ಕಾಲೇಜಿಗೆ ಆಗಮಿಸಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕಾಲೇಜಿನ ಪ್ರಾಂಶುಪಾಲರು, ಅಭಿವೃದ್ಧಿ ಸಮಿತಿಯವರು ಹಾಗೂ ವಿದ್ಯಾರ್ಥಿ ಗಳ ಜೊತೆ ಸಭೆ ನಡೆಸಿ ಚರ್ಚಿಸಿದರು.
ಈ ವೇಳೆ ಪ್ರತಿಭಟನನಿರತ ವಿದ್ಯಾರ್ಥಿ ಗಳ ಅಭಿಪ್ರಾಯವನ್ನು ಕೂಡ ಅವರು ಪಡೆದುಕೊಂಡರು. ಆದರೆ ಈ ವಿವಾದ ಬಗೆಹರಿಯುವ ನಿಟ್ಟಿನಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಎಂದು ತಿಳಿದು ಬಂದಿದೆ.
‘ನನ್ನ ಸೂಚನೆಯಂತೆ ಎಸಿಯವರು ಕಾಲೇಜಿಗೆ ತೆರಳಿ ಸಭೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇದು ಆ ಕಾಲೇಜಿಗೆ ಸಂಬಂಧಪಟ್ಟ ವಿಚಾರವಾಗಿದ್ದು, ಅದನ್ನು ಅಲ್ಲಿನ ಕಮಿಟಿಯವರು ತೀರ್ಮಾನ ತೆಗೆದು ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ಕಳೆದ ಮೂರು ವಾರಗಳಿಂದ ಸ್ಕಾರ್ಫ್ ಹಾಕಿದ ಕಾರಣಕ್ಕಾಗಿ ತರಗತಿ ಪ್ರವೇಶ ನಿರಾಕರಿಸಲ್ಪಟ್ಟ ಎಂಟು ಮಂದಿ ವಿದ್ಯಾರ್ಥಿನಿಯರು, ಈಗಲೂ ಕಾಲೇಜಿನ ಹೊರಗಡೆಯೇ ಕುಳಿತು ಮನೆಗೆ ವಾಪಾಸ್ಸು ಹೋಗುತ್ತಿದ್ದಾರೆ.