ಮೈಸೂರು: ಪಾರಿವಾಳ ಕಳವು ವಿಚಾರಕ್ಕೆ ಗಲಾಟೆ; ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯ!

ಮೈಸೂರು,ಜ.19: ಪಾರಿವಾಳಗಳನ್ನು ಕಳವುಗೈದನೆಂಬ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮೈಸೂರು ನಗರದ ಕೆ.ಆರ್.ಮೊಹಲ್ಲಾ ನಿವಾಸಿ ಗೋವಿಂದರಾಜು(49) ಎಂದು ಹೇಳಲಾಗಿದೆ.
ತಮ್ಮ ಮನೆಯಲ್ಲಿ ಸಾಕಿದ್ದ ಪಾರಿವಾಳಗಳನ್ನು ಎದುರು ಮನೆಯವರು ಕದ್ದಿದ್ದಾರೆ ಎಂದು ಗೋವಿಂದರಾಜು ಅವರ ಮಗ ಜಗಳಕ್ಕೆ ಬಿದ್ದಿದ್ದ. ಈ ಜಗಳ ವಿಕೋಪಕ್ಕೆ ತಿರುಗಿ ಪಾರಿವಾಗಳನ್ನು ಸಾಕಿದ್ದ ಗೋವಿಂದರಾಜು ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಮನೋಜ್‍ನಾಯಕ್, ಜಯಶಂಕರ್ ಕೊಲೆ ಆರೋಪಿಗಳಾಗಿದ್ದು, ಇವರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳಾದ ವಿನಾಯಕ್, ಪ್ರಮೋದ್‍ನಾಯಕ್ ತಲೆತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎದುರು-ಬದುರು ಮನೆಯಲ್ಲಿ ಯುವಕರು ಪಾರಿವಾಳ ಸಾಕಿಕೊಂಡಿದ್ದರು. ಸಂಕ್ರಾಂತಿ ಹಬ್ಬದ ರಾತ್ರಿಯಂದು ಉಲ್ಲಾಸ್ ಎಂಬಾತನ 38 ಪಾರಿವಾಳಗಳು ಕಳ್ಳತನವಾಗಿದ್ದವು. ಈ ವೇಳೆ ಪಾರಿವಾಳ ಕಳ್ಳತನವಾಗಿದ್ದಕ್ಕೆ ಬೈದುಕೊಂಡು ಉಲ್ಲಾಸ್ ಮತ್ತು ಮನೆಯವರು ಸುಮ್ಮನಾಗಿದ್ದರು.
ಎದುರು ಮನೆಯಲ್ಲಿದ್ದ ವಿನಾಯಕ್, ಪ್ರಮೋದ್‍ನಾಯಕ್, ಜಯಶಂಕರ್, ಮನೋಜ್‍ನಾಯಕ್, ವಿಜಯ್(ಕುಪ್ಪ), ಪಾರಿವಾಳ ಕದ್ದಿದ್ದಾರೆಂದು ಕೊಲೆಯಾದ ಗೋವಿಂದರಾಜು ಪುತ್ರ ಉಲ್ಲಾಸ್ ಆರೋಪ ಮಾಡಿದ್ದ. ಮಂಗಳವಾರ ವಿನಾಯಕ್ ಮನೆಯಲ್ಲಿ ಪಾರಿವಾಳಗಳಿರಬಹುದೆಂದು ಪರಿಶೀಲನೆ ಮಾಡಲು ಉಲ್ಲಾಸ್ ಸ್ನೇಹಿತ ಪ್ರಮೋದ್ ತೆರಳಿದ್ದ. ಈ ವೇಳೆ ಪ್ರಮೋದ್ ಮೇಲೆ ವಿನಾಯಕ್, ಜಯಶಂಕರ್, ಪ್ರಮೋದ್‍ನಾಯಕ್, ಮನೋಜ್‍ನಾಯಕ್ ಹಲ್ಲೆ ಮಾಡಿದ್ದರು ಎಂದು ಹೇಳಲಾಗಿದೆ.
ಆತನ ಮೇಲೆ ಹಲ್ಲೆ ನಡೆಸಿದ್ದನ್ನು ಉಲ್ಲಾಸ್ ತಂದೆ ಗೋವಿಂದರಾಜು ಈ ನಾಲ್ವರಿಗೆ ಪ್ರಶ್ನೆ ಮಾಡಿದ್ದಾರೆ. ಬಳಿಕ ಗೋವಿಂದರಾಜು ಮನೆ ಬಳಿ ಬಂದ ನಾಲ್ವರು ಗೋವಿಂದರಾಜು ಮತ್ತು ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಗೋವಿಂದರಾಜು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಬುಧವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







