ಮಾನವ ಹಕ್ಕುಗಳ ಉಲ್ಲಂಘನೆ ಸಂಖ್ಯೆ ಶೂನ್ಯಕ್ಕೆ ತರಬೇಕು: ಕಾನೂನು ಸಚಿವ ಮಾಧುಸ್ವಾಮಿ
`ಮಾನವ ಹಕ್ಕುಗಳು ಮತ್ತು ಅನುಷ್ಠಾನದ ದೃಷ್ಟಿಕೋನ' ವೆಬಿನಾರ್

ಬೆಂಗಳೂರು, ಜ. 19: `ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಸಂಖ್ಯೆಯನ್ನು ಶೂನ್ಯಕ್ಕೆ ತಲುಪುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯ, ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ `ಮಾನವ ಹಕ್ಕುಗಳು ಮತ್ತು ಅನುಷ್ಠಾನದ ದೃಷ್ಟಿಕೋನ' ಎಂಬ ವಿಚಾರದ ಮೇಲೆ ರಾಷ್ಟ್ರೀಯ ಮಟ್ಟದ ವೆಬಿನಾರ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
`ಕಾನೂನುಗಳ ದುರುಪಯೋಗ ತಡೆಗಟ್ಟುವಿಕೆಯಲ್ಲಿ ಕ್ರಮವಹಿಸಬೇಕು. ಇದಕ್ಕಾಗಿ ಹಾಗೂ ಮಾನವ ಹಕ್ಕುಗಳ ರಕ್ಷಣೆಗಾಗಿ ಸರಕಾರ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಹಸಿವಿನಿಂದ ಬಳಲುವವರು ರಾಜ್ಯದಲ್ಲಿ ಇರದಂತೆ ನೋಡಿಕೊಳ್ಳುವ ಹೊಣೆ ಸರಕಾರದ್ದಾಗಿದೆ. ಈ ಕೆಲಸವನ್ನು ಕರ್ನಾಟಕದ ಪ್ರಸ್ತುತ ಸರಕಾರ ನಿರ್ವಹಿಸುತ್ತಿದೆ ಎಂದು ಮಾಧುಸ್ವಾಮಿ ಇದೇ ವೇಳೆ ತಿಳಿಸಿದರು.
ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ಬನ್ನೂರು ಮಠ, ಕಾನೂನು ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಈಶ್ವರಭಟ್, ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಕೆ.ದ್ವಾರಕನಾಥ್ ಬಾಬು, ಕಾನೂನು ಆಯೋಗದ ಸದಸ್ಯರಾದ ನ್ಯಾಯಮೂರ್ತಿ ಅಶೋಕ ಜಿ.ನಿಜಗಣ್ಣನವರ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನಾರಾಯಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಕಾನೂನು ವಿಶ್ವ ವಿದ್ಯಾನಿಲಯದ ಡೀನ್ ಡಾ.ಸಿ.ಎಸ್.ಪಾಟೀಲ್, ಕಾನೂನು ಶಾಲೆಯ ನಿರ್ದೇಶಕಿ ರತ್ನಾ ಭರಮನಗೌಡ, ಕುಲಸಚಿವರಾದ ಜಿ.ಬಿ.ಪಾಟೀಲ್, ಮುಹ್ಮದ್ ಝಬೀರ್, ಸಹಪ್ರಾಧ್ಯಾಪಕರಾದ ಡಿ.ರಂಗಸ್ವಾಮಿ, ರಾಜೇಂದ್ರ ಕುಮಾರ್ ಹಿಟ್ಟಣಗಿ ಹಾಜರಿದ್ದರು.







