ಗರ್ಭಿಣಿ ಮಹಿಳಾ ಅರಣ್ಯ ರಕ್ಷಕಿಗೆ ಮಾಜಿ ಸರಪಂಚ್, ಆತನ ಪತ್ನಿಯಿಂದ ಥಳಿತ; ವೀಡಿಯೊ ವೈರಲ್

Photo: Twitter/@PraveenIFShere
ಪುಣೆ, ಜ. 20 : ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಗ್ರಾಮವೊಂದರಲ್ಲಿ ಮಾಜಿ ಸರಪಂಚ್ ಹಾಗೂ ಆತನ ಪತ್ನಿ ಮೂರು ತಿಂಗಳ ಗರ್ಭಿಣಿ ಮಹಿಳಾ ಅರಣ್ಯ ರಕ್ಷಕಿ ಹಾಗೂ ಆಕೆಯ ಪತಿಗೆ ಥಳಿಸಿರುವ ಘಟನೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿ ದಂಪತಿಯನ್ನು ಬಂಧಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಪಾಲ್ಸವಾಡೆ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಪೊಲೀಸರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸ್ಥಳೀಯ ಅರಣ್ಯ ನಿರ್ವಹಣಾ ಸಮಿತಿಯ ಸದಸ್ಯರಾಗಿರುವ ಆರೋಪಿಯು "ತನ್ನ ಅನುಮತಿಯಿಲ್ಲದೆ" ತನ್ನೊಂದಿಗೆ ಗುತ್ತಿಗೆ ಅರಣ್ಯ ಕಾರ್ಮಿಕರನ್ನು ಕರೆದುಕೊಂಡು ಹೋಗಿದ್ದಕ್ಕಾಗಿ ಮಹಿಳಾ ಅರಣ್ಯ ಸಿಬ್ಬಂದಿಯ ಮೇಲೆ ಕೋಪಗೊಂಡಿದ್ದ. ಹಲ್ಲೆ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುರುವಾರ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಮಹಾರಾಷ್ಟ್ರ ಪರಿಸರ ಸಚಿವ ಆದಿತ್ಯ ಠಾಕ್ರೆ, “ಆರೋಪಿಯನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ ಹಾಗೂ ಆತ ಕಠಿಣವಾದ ಕಾನೂನನ್ನು ಎದುರಿಸಲಿದ್ದಾನೆ. ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ' ಎಂದರು.
ಆರೋಪಿಯು ಗ್ರಾಮದ ಮಾಜಿ ಸರಪಂಚ್ ಹಾಗೂ ಸ್ಥಳೀಯ ಅರಣ್ಯ ನಿರ್ವಹಣಾ ಸಮಿತಿಯ ಸದಸ್ಯ ಎಂದು ಸತಾರಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಜಯ್ ಕುಮಾರ್ ಬನ್ಸಾಲ್ ಹೇಳಿದ್ದಾರೆ.
ತನ್ನ ಅನುಮತಿಯಿಲ್ಲದೆ ಗುತ್ತಿಗೆದಾರ ಅರಣ್ಯ ಕಾರ್ಮಿಕರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಕ್ಕಾಗಿ ಆರೋಪಿಯು ಮಹಿಳಾ ಅರಣ್ಯ ಸಿಬ್ಬಂದಿ ಮೇಲೆ ಕೋಪಗೊಂಡಿದ್ದ. ಆತ ತನ್ನ ಹೆಂಡತಿಯೊಂದಿಗೆ ಸೇರಿಕೊಂಡು ಮೂರು ತಿಂಗಳ ಗರ್ಭಿಣಿ ಮಹಿಳಾ ಅರಣ್ಯ ಸಿಬ್ಬಂದಿಯನ್ನು ಥಳಿಸಿದ್ದಾನೆ" ಎಂದು ಬನ್ಸಾಲ್ ಹೇಳಿದರು.
The accused has been arrested this morning and will face the law at its strictest. Such acts will not be tolerated. https://t.co/04shu6ahiz
— Aaditya Thackeray (@AUThackeray) January 20, 2022