ವಿದ್ಯಾರ್ಥಿಗಳ ಹಿಜಾಬ್ ಧಾರಣೆ ಅಶಿಸ್ತು ಎಂಬ ಶಿಕ್ಷಣ ಸಚಿವರ ಹೇಳಿಕೆ ಖಂಡನಾರ್ಹ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ
ಉಡುಪಿ: 'ಹಿಜಾಬ್ ಧರಿಸುವುದು ಅಶಿಸ್ತು, ಶಾಲೆ ಧರ್ಮವನ್ನು ಆಚರಿಸುವ ಸ್ಥಳವಲ್ಲ' ಎಂಬ ಶಿಕ್ಷಣ ಸಚಿವ ನಾಗೇಶ್ ಅವರ ಹೇಳಿಕೆ ಖಂಡನಾರ್ಹ ಎಂದು ಮುಸ್ಲಿಮ್ ಒಕ್ಕೂಟ ಹೇಳಿದೆ.
ಸಚಿವರ ಈ ಹೇಳಿಕೆ ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಾಕರಿಸುತ್ತದೆ. ಭಾರತ ವಿವಿಧ ಧರ್ಮ, ಭಾಷೆ, ಸಂಸೃತಿ, ಆಚರಣೆಗಳ ವೈವಿಧ್ಯಮಯ ದೇಶ. ಈ ವೈವಿಧ್ಯತೆಗಳ ಸಹಕರಣ ಮತ್ತು ದೇಶದ ಪ್ರಜೆಗಳಾದ ಸಹಜೀವಿಗಳ ಪರಸ್ಪರ ಧರ್ಮ, ಆಚರಣೆ, ನಂಬಿಕೆ, ಸಂಸೃತಿ, ಭಾಷೆಗಳೊಂದಿಗೆ ಸಹಿಷ್ಣುತೆಯಿಂದ ಮುನ್ನಡೆಯುವಿಕೆ ಈ ದೇಶದ ಶಕ್ತಿ. ಇಲ್ಲದಿದ್ದಲ್ಲಿ ಸಚಿವರು ಯಾವ ವಿದ್ಯಾರ್ಥಿಗಳ ಹಿಜಾಬ್ ಧರಿಸುವಿಕೆ ಅಶಿಸ್ತು ಎನ್ನುತ್ತಿದ್ದಾರೊ ಅದೇ ವಿಧ್ಯಾರ್ಥಿಗಳಿಗೆ ಅವರದೇ ಪಠ್ಯಗಳಲ್ಲಿ "ಭಾರತ ವಿವಿಧತೆಯಲ್ಲಿ ಏಕತೆಯ ದೇಶ" ಕಲಿಸುತ್ತಿರುವುದರ ಅರ್ಥವೇನು ? ದೇಶದ ಪ್ರತಿಯೊಂದು ಹಳ್ಳಿ ಪಟ್ಟಣಗಳಲ್ಲಿ ದೇಶದ ಪ್ರಜೆಗಳು ಧರ್ಮ, ನಂಬಿಕೆ, ಸಂಸ್ಕೃತಿ, ಭಾಷೆ, ಆಚರಣೆ ಇತ್ಯಾದಿಗಳನ್ನು ವೈವಿಧ್ಯಮಯವಾಗಿ ರೂಢಿಸಿಕೊಂಡು ಬರುತ್ತಿರುವಾಗ ಶಾಲೆಗಳಲ್ಲಿ ವಿದ್ಯಾರ್ಥಿಗಳು "ಸಮವಸ್ತ್ರದ ಪಾಲನೆಯೊಂದಿಗೆ" ತಮ್ಮ ಧಾರ್ಮಿಕ ಬೇಡಿಕೆಯನ್ನು ಪೂರೈಸಿದರೆ ಸಮಸ್ಯೆಯಾಗುವುದು ಹೇಗೆ ? ಎಂದು ಮುಸ್ಲಿಮ್ ಒಕ್ಕೂಟ ಪ್ರಶ್ನಿಸಿದೆ.
ಹಿಜಾಬ್ ರಾಜಕೀಯಗೊಳಿಸಲಾಗುತ್ತಿದೆ, ವಿದ್ಯಾರ್ಥಿಗಳು ಈಗ ಏಕೆ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಹೇಳುತ್ತಿದ್ದಾರೆ ಎಂದು ಕೂಡಾ ಸಚಿವರು ಪ್ರಶ್ನಿಸಿದ್ದಾರೆ. ವಾಸ್ತವದಲ್ಲಿ ಸಚಿವರು ತಾವು ಪ್ರತಿನಿಧಿಸುತ್ತಿರುವ ರಾಜಕೀಯ ಕನ್ನಡಿಯಿಂದ ಸಮಸ್ಯೆಯನ್ನು ನೋಡುತ್ತಿದ್ದಾರೆ. ವಿದ್ಯಾರ್ಥಿಗಳು ಸ್ಕಾರ್ಫ್ ಹಾಕುದನ್ನು ತಡೆಯುದರಿಂದ ಸಿಗುವ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರದಿಂದ ಈಚೆಗೆ ಬಂದು ಓರ್ವ ಸರಕಾರದ ಪ್ರತಿನಿಧಿಯಾಗಿ ನಿರ್ಣಾಯ ಕೈಗೊಳ್ಳಬೇಕಾಗಿದೆ. ಸರಕಾರ ಎಂಬುದು ಎಲ್ಲರ ಸರಕಾರ ಆ ಎಲ್ಲರಲ್ಲಿ ಸ್ಕಾರ್ಫ್ ಧರಿಸುವ ತಮ್ಮ ಹಕ್ಕಿನ ಬೇಡಿಕೆ ಇಡುತ್ತಿರುವ ವಿದ್ಯಾರ್ಥಿಗಳು ಸೇರಿದ್ದಾರೆ. ಅವರ ಹಕ್ಕಿನ ರಕ್ಷಣೆಯೂ ಸರಕಾರದ ಹೊಣೆಗಾರಿಕೆ. ಯಾರೋ ರಾಜಕೀಯ ಮಾಡುತ್ತಿದ್ದಾರೆ ಎಂಬ ಗುಮಾನಿಯನ್ನು ಇಟ್ಟುಕೊಂಡು ಜನರ ಹಕ್ಕುಗಳನ್ನು ಕಸಿಯುವುದು ಸರಿಯೇ ? ಸಂವಿಧಾನ ನೀಡಿದ ಹಕ್ಕುಗಳನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿಯೇ ಹೊರತು ಸಂವಿಧಾನಾತ್ಮಕವಾಗಿ ದೊರೆತ ಸ್ಥಾನದಲ್ಲಿ ಇದ್ದುಕೊಂಡು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಈಗೇಕೆ ಕೇಳುತ್ತೀರಿ ಎಂದು ಪ್ರಶ್ನಿಸುದಲ್ಲ. ಯಾರೇ ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗಲೇ ತಮ್ಮ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಪ್ರಶ್ನಿಸುವುದು ಎಂದು ಒಕ್ಕೂಟವು ಹೇಳಿದೆ. ಶಾಲೆಗಳು ಧರ್ಮ ಅಚರಣೆ ಸ್ಥಳವಲ್ಲ ಎಂದು ಅವರು ಹೇಳುದಾದರೆ ಅವರ ದೃಷ್ಟಿಯಲ್ಲಿ ಶಾಲೆಗಳು ಧರ್ಮ ನಿರಾಕರಣೆಯ ಸ್ಥಳಗಳೇ ? ಅದನ್ನು ಅವರು ಸ್ಪಷ್ಟಪಡಿಸಲಿ. ಧರ್ಮವನ್ನು ಅಥವಾ ಯಾವುದೇ ಭಿನ್ನ ವೈಚಾರಿಕತೆಯನ್ನು ಅವರಿಗೆ ಒಪ್ಪಿಗೆ ಆದಾಗ ಪಾಲಿಸಲು ಆರಂಭಿಸುವುದು ಯಾ ಬಿಡುವುದು ಅವರವರ ಆಯ್ಕೆ. ಆಗೇಕೆ ಮಾಡಿಲ್ಲ ಈಗೇಕೆ ಮಾಡುತ್ತೀರಿ ಎಂದು ಯಾರದೇ ವೈಯಕ್ತಿಕ ಜೀವನವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ನಮ್ಮ ಸಂವಿಧಾನ ನೀಡಿಲ್ಲ. ಸಾರ್ವಭೌಮ ಭಾರತ ದೇಶ ಎಂದರೆ ಈ ದೇಶದ ಸಾರ್ವಭೌಮ ಪ್ರಜೆಗಳು ಎಂದು ಘೋಷಿಸಿ ಕೊಂಡ ದೇಶವಿದು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಇಬ್ರಾಹಿಂ ಸಾಹೇಬ್ ಕೋಟ ತಿಳಿಸಿದ್ದಾರೆ.