ದ್ವಿತೀಯ ಏಕದಿನ: ದಕ್ಷಿಣ ಆಫ್ರಿಕಾ ಗೆಲುವಿಗೆ 288 ರನ್ ಸವಾಲು
ರಿಷಭ್ ಪಂತ್, ಕೆ.ಎಲ್.ರಾಹುಲ್ ಅರ್ಧಶತಕ

ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್, Photo: AFP
ಪಾರ್ಲ್,ಜ.21: ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಹಾಗೂ ನಾಯಕ ಕೆ.ಎಲ್.ರಾಹುಲ್ ಅರ್ಧಶತಕಗಳ ಕೊಡುಗೆ ನೆರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ದ್ವಿತೀಯ ಏಕದಿನ ಪಂದ್ಯದ ಗೆಲುವಿಗೆ 288 ರನ್ ಗುರಿ ನೀಡಿದೆ.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತವು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿದೆ. ಇನಿಂಗ್ಸ್ ಆರಂಭಿಸಿದ ರಾಹುಲ್ (55 ರನ್, 79 ಎಸೆತ, 4 ಬೌಂಡರಿ) ಹಾಗೂ ಶಿಖರ್ ಧವನ್ (29, 38 ಎಸೆತ)ಮೊದಲ ವಿಕೆಟ್ಗೆ 63 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.
ವಿರಾಟ್ ಕೊಹ್ಲಿ ರನ್ ಖಾತೆ ತೆರೆಯಲು ವಿಫಲರಾದರು. ಭಾರತವು 2 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದ್ದಾಗ ಜೊತೆಯಾದ ರಾಹುಲ್ ಹಾಗೂ ಪಂತ್(85 ರನ್, 71 ಎಸೆತ, 10 ಬೌಂ.2 ಸಿ.)3ನೇ ವಿಕೆಟ್ಗೆ 115 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಶಾರ್ದೂಲ್ ಠಾಕೂರ್(ಔಟಾಗದೆ 40, 38 ಎಸೆತ, 3 ಬೌಂ.,1 ಸಿ.) ಹಾಗೂ ಆರ್.ಅಶ್ವಿನ್ (ಔಟಾಗದೆ 25, 24 ಎಸೆತ) 7ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 48 ರನ್ ಸೇರಿಸಿ ತಂಡದ ಮೊತ್ತವನ್ನು 287ಕ್ಕೆ ತಲುಪಿಸಿದರು. ದಕ್ಷಿಣ ಆಫ್ರಿಕಾದ ಪರವಾಗಿ ಸ್ಪಿನ್ನರ್ ತಬ್ರೈಝ್ ಶಂಸಿ(2-57)ಯಶಸ್ವಿ ಬೌಲರ್ ಎನಿಸಿಕೊಂಡರು.