ಉಡುಪಿ: ದಿನದಲ್ಲಿ ಸಾವಿರದ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ
ಡಿ.25ರ ಬಳಿಕ ಒಂದೇ ದಿನದಲ್ಲಿ ನಾಲ್ವರು ಬಲಿ
ಉಡುಪಿ, ಜ.21: ಕಳೆದ ವರ್ಷದ ಮೇ 15ರ ಬಳಿಕ ಮೊದಲ ಬಾರಿಗೆ ಶುಕ್ರವಾರ ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬಂದವರ ಸಂಖ್ಯೆ ಸಾವಿರದ ಗಡಿಯನ್ನು ದಾಟಿ 1018 ತಲುಪಿದೆ. ಅಲ್ಲದೇ ಡಿ.25ರ ಬಳಿಕ ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾವು ಸಂಭವಿಸಿದ್ದು, ಒಂದೇ ದಿನದಲ್ಲಿ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.
ನಾಲ್ಕು ಸಾವು ನಿನ್ನೆ ಮತ್ತು ಇಂದು ಸಂಭವಿಸಿದೆ. 55, 71, 77 ಹಾಗೂ 47ರ ಹರೆಯದ ಪುರುಷರು ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. 47 ವರ್ಷ ಪ್ರಾಯದ ಒಬ್ಬರು ಜ.6ರಂದು ಆಸ್ಪತ್ರೆಗೆ ದಾಖಲಾಗಿ ನಿನ್ನೆ ಮೃತಪಟ್ಟರೆ, ಉಳಿದವರೆಲ್ಲರೂ ಜ.18 ಮತ್ತು 19ಕ್ಕೆ ಚಿಕಿತ್ಸೆಗೆಂದು ದಾಖಲಾಗಿ 20 ಹಾಗೂ 21ರಂದು ಮೃತಪಟ್ಟಿದ್ದಾರೆ. ಎಲ್ಲರೂ ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 483ಕ್ಕೇರಿದೆ.
ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಇಂದು 281ರಷ್ಟಿದೆ. ಜಿಲ್ಲೆಯಲ್ಲಿ ಸದ್ಯ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 5825 ಎಂದು ರಾಜ್ಯ ಕೋವಿಡ್ ಬುಲೆಟಿನ್ ಜಿಲ್ಲೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ.
ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಇಂದು 281ರಷ್ಟಿದೆ. ಜಿಲ್ಲೆಯಲ್ಲಿ ಸದ್ಯ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 5825 ಎಂದು ರಾಜ್ಯ ಕೋವಿಡ್ ಬುಲೆಟಿನ್ ಮಾಹಿತಿ ನೀಡಿದೆ.
1018 ಪಾಸಿಟಿವ್‌ನಲ್ಲಿ 667 ಮಂದಿ 0-25ವರ್ಷದವರು
ಇಂದು ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬಂದ ಒಟ್ಟು 1018 ಸೋಂಕಿತರಲ್ಲಿ 667 ಮಂದಿ ಐದು ವರ್ಷದೊಳಗಿನ ಮಕ್ಕಳು ಸೇರಿದಂತೆ 25 ವರ್ಷದೊಳಗಿನವರು ಸೇರಿದ್ದಾರೆ. ಜಿಲ್ಲೆಯಲ್ಲಿ ಕಳೆದ ಜನವರಿ ಒಂದರಿಂದ ಇಂದಿನವರೆಗೆ ಒಟ್ಟು 7738 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದು, ಇವರಲ್ಲಿ 4150 ಮಂದಿ 0-25ವರ್ಷ ವಯೋವರ್ಗಕ್ಕೆ ಸೇರಿದವರು ಎಂದು ಮಾಹಿತಿ ತಿಳಿಸಿದೆ.
ಇಂದು ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಐವರು ಮಕ್ಕಳು ಕೊರೋನಕ್ಕೆ ಪಾಸಿಟಿವ್ ಬಂದಿದ್ದರೆ, 6ರಿಂದ 10 ವರ್ಷದೊಳಗಿನ 55, 11ರಿಂದ 15 ವರ್ಷದೊಳಗಿನ 228, 16ರಿಂದ 20ವರ್ಷದೊಳಗಿನ 279 ಹಾಗೂ 20ರಿಂದ 25ವರ್ಷದೊಳಗಿನ 100 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.