ದಲಿತರಿಗೆ ವೈದಿಕ ದೀಕ್ಷೆ ಮತಾಂತರದ ಭಾಗ: ಡೀಕಯ್ಯ
‘ಹೆಚ್ಚುತ್ತಿರುವ ಅಸಮಾನತೆ’ ಸಂವಾದ ಸರಣಿಗೆ ಚಾಲನೆ

ಮಂಗಳೂರು, ಜ.20: ಸಿಟಿಝನ್ಸ್ ಫೋರಂ ಫಾರ್ ಡೆವಲಪ್‌ಮೆಂಟ್, ಬಹುತ್ವ ಕರ್ನಾಟಕದ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಹೆಚ್ಚುತ್ತಿರುವ ಅಸಮಾನತೆ’ ಕುರಿತಾದ ಸಂವಾದ ಸರಣಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ವೆಲೆನ್ಸಿಯಾದ ರೋಶನಿ ನಿಲಯದ ಬಯಲು ರಂಗ ಮಂದಿರದಲ್ಲಿ ನಡೆದ ಪ್ರಥಮ ಸರಣಿಯಲ್ಲಿ ದಿ.ಡಾ.ಕೃಷ್ಣ ಮೋಹನ ಪ್ರಭುರನ್ನು ಉದ್ಯಮಿ, ಬರಹಗಾರ ಸುಮಿತ್ ರಾವ್ ಸಂಸ್ಮರಣೆಗೈದರು.
ದಲಿತ ಚಳವಳಿಗಾರ, ಚಿಂತಕ ಪಿ.ಡೀಕಯ್ಯ ಮಾತನಾಡಿ, ದೇಶದಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದು 72 ವರ್ಷಗಳ ಹೊಸ್ತಿಲಲ್ಲಿರುವ ಇಂದೂ ದೇಶದಲ್ಲಿ ದಲಿತ ಸಮುದಾಯದ ಮೇಲಿನ ದೌರ್ಜನ್ಯ, ಅಸಮಾನತೆಯ ಕುರಿತಂತೆ ಅನಿಸಿಕೆ ವ್ಯಕ್ತಪಡಿಸಿದರು. ಕೊರೋನದಂತಹ ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲೂ ದಲಿತರ ಮೇಲಿನ ಅಸಮಾನತೆ ನಿಂತಿಲ್ಲ ಎಂದ ಅವರು, ತಮ್ಮ ಸುತ್ತಮುತ್ತಲಲ್ಲಿ ಇಂದಿಗೂ ಅನುಭವಿಸುತ್ತಿರುವ ಕೆಲವೊಂದು ಅಸ್ಪಶ್ಯತೆ, ಅಸಮಾತೆಯ ಘಟನೆಗಳನ್ನು ವಿವರಿಸಿದರು.
ಹಲವು ವರ್ಷಗಳಿಂದ ದಲಿತ ಕೇರಿಗಳಲ್ಲಿ ಪೇಜಾವರ ಸ್ವಾಮೀಜಿಯಿಂದ ವೈದಿಕ ದೀಕ್ಷೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇದು ವೈದಿಕ ಸಮುದಾಯದಿಂದ ನಡೆಯುತ್ತಿರುವ ಒಂದು ರೀತಿಯ ಮತಾಂತರ ಎಂದು ಆರೋಪಿಸಿದ ಅವರು, ದಲಿತ ಸಮುದಾಯದ ಯುವ ಪೀಳಿಗೆಯನ್ನು ಮತೀಯವಾದಿಗಳನ್ನಾಗಿಸಲು ನಡೆಸುತ್ತಿರುವ ಹುನ್ನಾರ ಎಂದರು.
ತುಳು ಭಾಷೆಯ ಬಗ್ಗೆ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಗೆ 359 ಕೋಟಿ ರೂ.ಗಳನ್ನು ಸರಕಾರದಿಂದ ನೀಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ತುಳು ವಿಶ್ವವಿದ್ಯಾನಿಲಯ ಸ್ಥಾಪಿಸಲು ಅನುದಾನ ತರಿಸುವ ತಾಕತ್ತು ನಮ್ಮ ಜಿಲ್ಲೆಯ ಸಂಸದ, ಶಾಸಕರಿಗೆ ಇೆಯೇ ಎಂದು ಅವರು ಪ್ರಶ್ನಿಸಿದರು.
ಮಹಿಳೆಯರ ಮೇಲಿನ ಅಸಮಾನತೆ ಬಗ್ಗೆ ವಿಷಯ ಮಂಡಿಸಿದ ಮಹಿಳಾ ಪರ ಚಿಂತಕಿ ವಾಣಿ ಪೆರಿಯೋಡಿ, ಅಪೌಷ್ಠಿಕತೆಯಲ್ಲಿ ಅಸಮಾನತೆ ಮುಂದುವರಿದಿದ್ದು, ಪುರುಷರ ಪ್ರಮಾಣ ಶೇ. 20ರಷ್ಟಾಗಿದ್ದರೆ, ಮಹಿಳೆಯರ ಅಪೌಷ್ಠಿಕತೆ ಶೇ.48ರಷ್ಟಿದೆ. ಪತ್ನಿಗೆ ಪುರುಷರಿಂದ ದೌರ್ಜನ್ಯ, ಹಿಂಸೆಯನ್ನು ಸಮರ್ಥಿಸಿಕೊಳ್ಳುವವರಲ್ಲಿ ಶೇ.72 ಮಂದಿ ಹೆಣ್ಣು ಮಕ್ಕಳಾಗಿದ್ದರೆ, ಶೇ.81 ಮಂದಿ ಗಂಡು ಮಕ್ಕಳು ಎಂಬುದು ಆತಂಕಕಾರಿ. ಇನ್ನು ರಾಜಕೀಯ ವಿಷಯದಲ್ಲಿ ಮಹಿಳೆಯರಿಗೆ ಇಂದಿಗೂ ಶೇ.10ರಷ್ಟೂ ಅವಕಾಶಗಳು ದೊರಕದಿರುವುದು ಅಸಮಾನತೆಯ ಪರಮಾವಧಿ ಎಂದು ಅವರು ವಿಶ್ಲೇಷಿಸಿದರು.
ಯುವ ಬರಹಗಾರ, ಚಿಂತಕ ಶೌಕತ್ ಅಲಿ ಮಾತನಾಡಿ, ಅಲ್ಪಸಂಖ್ಯಾತರ ಹಕ್ಕುಗಳು ಅಸಮಾನತೆಯ ಬಗ್ಗೆ ಮಾತನಾಡುವುದೂ ಇಂದು ಅಪರಾಧವಾಗಿಬಿಟ್ಟಿದೆ. ಧ್ವನಿ ಎತ್ತುವವರನ್ನು ಗುರಿಯಾಗಿಸಿ ಸಮುದಾಯವನ್ನು ಓಲೈಕೆ ಮಾಡುವರೆಂಬ ಬಿರುದನ್ನು ನೀಡಲಾಗುತ್ತದೆ ಎಂದು ಹೇಳಿದರು
ಜನಕವಿ, ಸಾಮಾಜಿಕ ಚಿಂತಕ ಜನಾರ್ದನ ಕೆಸರುಗದ್ದೆ ಸಂವಾದವನ್ನು ನಿರ್ವಹಿಸಿದರು. ನಟೇಶ್ ಉಳ್ಳಾಲ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
