ಉಡುಪಿ ಜಿಲ್ಲೆ: 763 ಮಂದಿಯಲ್ಲಿ ಕೊರೋನ ಪಾಸಿಟಿವ್
ದಿನದಲ್ಲಿ 600 ಮಂದಿ ಸೋಂಕಿನಿಂದ ಗುಣಮುಖ
![ಉಡುಪಿ ಜಿಲ್ಲೆ: 763 ಮಂದಿಯಲ್ಲಿ ಕೊರೋನ ಪಾಸಿಟಿವ್ ಉಡುಪಿ ಜಿಲ್ಲೆ: 763 ಮಂದಿಯಲ್ಲಿ ಕೊರೋನ ಪಾಸಿಟಿವ್](https://www.varthabharati.in/sites/default/files/images/articles/2022/01/22/322340-1642865398.jpg)
ಉಡುಪಿ, ಜ.22: ಜಿಲ್ಲೆಯಲ್ಲಿ ಶನಿವಾರ ಕೋವಿಡ್ಗೆ ಪಾಸಿಟಿವ್ ಬಂದವರ ಸಂಖ್ಯೆ 763ಕ್ಕೆ ಇಳಿದಿದೆ. ದಿನದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೂ 600ರಷ್ಟಿದೆ. ಜಿಲ್ಲೆಯಲ್ಲಿ ಸದ್ಯ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 5988 ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 763 ಮಂದಿಯಲ್ಲಿ 408 ಮಂದಿ ಪುರುಷರು ಹಾಗೂ 355 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 497 ಮಂದಿ ಉಡುಪಿ ತಾಲೂಕಿಗೆ ಸೇರಿದವರಾಗಿದ್ದಾರೆ. ಕುಂದಾಪುರ ತಾಲೂಕಿನ 178 ಹಾಗೂ ಕಾರ್ಕಳ ತಾಲೂಕಿನ 84 ಮಂದಿಯೊಂದಿಗೆ ಹೊರಜಿಲ್ಲೆಗಳ ನಾಲ್ವರು ಸಹ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.
ಇಂದು ಪಾಸಿಟಿವ್ ಬಂದ 763 ಮಂದಿಯಲ್ಲಿ 33 ಮಂದಿಯನ್ನು ಕೋವಿಡ್ ಕೇರ್ಸೆಂಟರ್ಗೂ, 13 ಮಂದಿಯನ್ನು ಕೋವಿಡ್ ಆಸ್ಪತ್ರೆಗೂ, 13 ಮಂದಿಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿದ್ದು, ಉಳಿದ 704 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಜಿಲ್ಲೆಯಲ್ಲಿ ಒಟ್ಟು 150 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು ಇವರಲ್ಲಿ 11 ಮಂದಿ ವೆಂಟಿಲೇಟರ್, 18 ಮಂದಿ ಐಸಿಯು ಹಾಗೂ 24ಮಂದಿ ಎಚ್ಡಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಶುಕ್ರವಾರ 600 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನ ದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 2557ಕ್ಕೇರಿದೆ. ನಿನ್ನೆ ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 3357 ಮಂದಿ, ಕುಂದಾಪುರದಲ್ಲಿ 1265 ಹಾಗೂ ಕಾರ್ಕಳ ತಾಲೂಕಿನ 551 ಮಂದಿ ಸೇರಿದಂತೆ ಒಟ್ಟು 5173 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 8401ಕ್ಕೇರಿದೆ. ಜಿಲ್ಲೆಯಲ್ಲಿ ನಿನ್ನೆ ನಾಲ್ವರು ಮೃತ ಪಟ್ಟಿದ್ದು (ಒಟ್ಟು 483) ಇಂದು ಯಾರೂ ಬಲಿಯಾಗಿಲ್ಲ.
739 ಮಂದಿಗೆ ಮುನ್ನೆಚ್ಚರಿಕೆ ಡೋಸ್: ಜಿಲ್ಲೆಯಲ್ಲಿ ಇಂದು ಒಟ್ಟು 739 ಮಂದಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟವರಿಗೆ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 60 ವರ್ಷಕ್ಕೂ ಮೇಲ್ಪಟ್ಟ 358 ಮಂದಿ ಲಸಿಕೆ ಪಡೆದರೆ, 352 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 29 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಸೇರಿದ್ದಾರೆ.
640 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 640 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 67 ಮಂದಿ 15ರಿಂದ 18 ವರ್ಷ ದೊಳಗಿನ ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲಾಗಿದೆ. ಒಟ್ಟಾರೆಯಾಗಿ ದಿನದಲ್ಲಿ 199 ಮಂದಿ ಮೊದಲ ಡೋಸ್ ಹಾಗೂ 441 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ.ಉಡುಪ ತಿಳಿಸಿದ್ದಾರೆ.