ವಿಜಯಪುರದ ಅಕ್ಕಮಹಾದೇವಿ ವಿವಿಯನ್ನು `ಮಹಿಳಾ ವಿವಿ'ಯನ್ನಾಗಿಯೇ ಮುಂದುವರಿಸಲು ಒತ್ತಾಯ

ಬೆಂಗಳೂರು, ಜ. 22: `ವಿಜಯಪುರದ ಅಕ್ಕಮಹಾದೇವಿ ವಿ.ವಿ.ಯನ್ನು ಮಹಿಳಾ ವಿವಿಯನ್ನಾಗಿಯೇ ಮುಂದುವರಿಸಬೇಕು. ವಿವಿಗೆ ಸೂಕ್ತ ಮುಂದಾಳತ್ವ ಒದಗಿಸಿ ಅದರ ಕಾಯಕಲ್ಪಕ್ಕೆ ನೆರವಾಗಬೇಕು. ಸಬಲ, ಸೂಕ್ಷ್ಮ, ಸ್ವಾಯತ್ತ ಮಹಿಳೆಯರನ್ನು ವಿವಿ ರೂಪಿಸುವಂತೆ ಆಗಬೇಕು. ಈ ವಿಚಾರದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಬಿಟ್ಟು ಮಹಿಳಾ ವಿವಿ ಲಿಂಗಸಮಾನತೆಯತ್ತ ದೃಢ ಹೆಜ್ಜೆಗಳನ್ನಿಟ್ಟು ಸಮಾಜಕ್ಕೆ ದಾರಿದೀಪವಾಗುವಂತಹ ಅವಕಾಶ ಕಲ್ಪಿಸಲು ಸರಕಾರದ ಮೇಲೆ ಒತ್ತಡ ಹೇರಬೇಕು' ಎಂದು ಕೋರಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದೆ.
ಶನಿವಾರ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಮಹಿಳಾ ವಿವಿಯ ವಿಶ್ರಾಂತ ಉಪಕುಲಪತಿ ಡಾ.ಸಬೀಹಾ ಭೂಮಿಗೌಡ, ದು.ಸರಸ್ವತಿ, ಡಾ.ವಸುಂಧರಾ ಭೂಪತಿ, ಅಕೈ ಪದ್ಮಶಾಲಿ, ಅಖಿಲ, ಡಾ.ಜಯಲಕ್ಷ್ಮಿ, ಮಮತಾ, ಚಂದ್ರವತಿ ಸೇರಿ ಇನ್ನಿತರರು ಉಭಯ ನಾಯಕರಿಗೆ ಮನವಿ ಸಲ್ಲಿಸಿದರು. `ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ದೇಶ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ಹೆಮ್ಮೆಯ ಅಕ್ಕಮಹಾದೇವಿ ಮಹಿಳಾ ವಿವಿಯನ್ನು ಉಳಿಸಲು ಹೋರಾಡಬೇಕಾಗಿರುವುದು ವಿಪರ್ಯಾಸವಾಗಿದೆ' ಎಂದು ಒಕ್ಕೂಟ ಬೇಸರ ವ್ಯಕ್ತಪಡಿಸಿದೆ.
ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ದೃಷ್ಟಿಯಿಂದ ಮಹಿಳಾ ಟಾಸ್ಕ್‍ಫೋರ್ಸ್ ಹಾಗೂ ಡಾ.ನಂಜುಂಡಪ್ಪ ವರದಿಯ ಫಲವಾಗಿ ಸ್ಥಾಪನೆಯಾದ ಮಹಿಳಾ ವಿವಿ, 20 ವರ್ಷಗಳಲ್ಲಿ ಹಲವು ತೊಡಕುಗಳ ನಡುವೆಯೂ ವಿವಿ ತನ್ನ ಸ್ಥಾಪನೆಯ ಸದುದ್ದೇಶಕ್ಕಾಗಿ ದುಡಿಯುತ್ತಿದೆ. ಅವಕಾಶ ವಂಚಿತ ಸಮುದಾಯಗಳನ್ನು ಉನ್ನತ ಶಿಕ್ಷಣಕ್ಕೆ ಎಳೆದು ತರುವುದಲ್ಲದೆ ಮಹಿಳಾ ಲೋಕದೃಷ್ಟಿಯ ಅನನ್ಯತೆಯನ್ನು ಪಠ್ಯಕ್ರಮದಲ್ಲಿ, ಸಂಶೋಧನಾ ಪ್ರಬಂಧದ ವಸ್ತುಗಳಲ್ಲಿ, ಸಂಶೋಧನಾ ಯೋಜನೆಗಳಲ್ಲಿ ಅನುಷ್ಠಾನಕ್ಕೆ ಅಳವಡಿಸುವಲ್ಲಿ ವಿವಿ ಮಹತ್ವರ ಪಾತ್ರ ವಹಿಸಿದೆ ಎಂದು ಒಕ್ಕೂಟ ತಿಳಿಸಿದೆ.
ಮಹಿಳಾ ವಿವಿಯೆಂದರೆ ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ಅಕ್ಷರ ಸಾಮ್ರಾಜ್ಯವಲ್ಲ, ಬರೀ ಹೆಣ್ಣುಗಳೇ ಇರುವ ಸುರಕ್ಷಿತಪ್ರದೇಶವೆಂಬ ಭ್ರಮೆ ಹುಟ್ಟಿಸುವ ಹೆಣ್ಣುಗೂಡಲ್ಲ. ಬದಲಿಗೆ ಅದು ಹೆಣ್ಣು ಲೋಕದೃಷ್ಟಿಯನ್ನು ಸ್ತ್ರೀಪುರುಷರೆಲ್ಲರೂ ಅರಿತುಕೊಳ್ಳುವಂತೆ ಮಾಡಲು ಅಗತ್ಯವಾದ ವಾತಾವರಣ ಮತ್ತು ಜ್ಞಾನಶಿಸ್ತುಗಳನ್ನು ಸಮಾಜಕ್ಕೆ ಪರಿಚಯಿಸುವ ತಾಣ. ಇಂತಹ ವಿವಿಯಿಂದ `ಮಹಿಳಾ' ಎಂಬುದನ್ನು ತೆಗೆದುಹಾಕಲು ಒಳಗೊಳಗೆ ತಯಾರಿ ನಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಒಕ್ಕೂಟ ಮನವಿಯಲ್ಲಿ ಆಗ್ರಹಿಸಿದೆ.
ಯಾವುದೇ ಕಾರಣಕ್ಕೂ ಮುಚ್ಚುವುದು ಬೇಡ
`ದೇಶದ 17 ಮಹಿಳಾ ವಿವಿಗಳ ಪೈಕಿ ಮೂರು ವಿವಿಗಳು ಮುಚ್ಚಲ್ಪಟ್ಟಿದ್ದು, ಉಳಿದ 14 ಮಹಿಳಾ ವಿವಿಗಳಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯೂ ಒಂದು. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಬರುವಂತಾಗಿದೆ. ಮಹಿಳಾ ಅಧ್ಯಯನಕ್ಕೆ ಮೀಸಲಿದ್ದು, ಕೌಶಲ್ಯ ಆಧರಿತ ಶಿಕ್ಷಣವನ್ನೂ ನೀಡುತ್ತಿದೆ. ಇಂತಹ ವಿವಿಯ ಸದೃಢಗೊಳಿಸಲು ಹೆಚ್ಚಿನ ನೆರವು ನೀಡಬೇಕು. ರಾಜ್ಯ ಮಟ್ಟದ ವಿವಿಯನ್ನು ವಿಜಯಪುರ, ಬಾಗಲಕೋಟೆಗೆ ಸೀಮಿತಗೊಳಿಸುವುದು ಸಲ್ಲ. ಕನ್ನಡದ ವಿಶೇಷವಾಗಿ ಮಹಿಳಾ ಅಸ್ಮಿತೆಯಾಗಿ ಮಹಿಳಾ ವಿವಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು'
-ಡಾ.ವಸುಂಧರಾ ಭೂಪತಿ ಲೇಖಕಿ








