ಉಚಿತ ಕೊಡುಗೆಗಳ 'ವಿವೇಚನಾರಹಿತ ಭರವಸೆʼ ನೀಡುವ ರಾಜಕೀಯ ಪಕ್ಷಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಹೊಸದಿಲ್ಲಿ, ಜ.22: ಚುನಾವಣೆಗೆ ಮುನ್ನ ಸಾರ್ವಜನಿಕ ನಿಧಿಗಳಿಂ ವಿವೇಚನಾರಹಿತವಾಗಿ ಉಚಿತ ಕೊಡುಗೆಗಳ ಭರವಸೆ ನೀಡುವ ಅಥವಾ ಅವುಗಳನ್ನು ವಿತರಿಸುವ ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆಗೆ ಮುಟ್ಟುಗೋಲುಹಾಕಬೇಕು ಹಾಗೂ ಅದರ ನೋಂದಣಿಯನ್ನು ರದ್ದುಪಡಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಸುಪ್ರೀಂಕೋರ್ಟ್ನಲ್ಲಿ ಶನಿವಾರ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿದೆ.
ಅನುಚಿತವಾದ ರೀತಿಯಲ್ಲಿ ಮತದಾರರಿಂದ ರಾಜಕೀಯ ಲಾಭವನ್ನು ಪಡೆಯುವುದಕ್ಕಾಗಿ ಇಂತಹ ಜನಮರುಳು ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಸಂವಿಧಾನದ ಉಲ್ಲಂಘನೆಯಾಗಿದೆ. ಆದುದಿರಿಂದ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕಾಗಿದೆ ಹಾಗೂ ಭಾರತೀಯ ಚುನಾವಣಾ ಆಯೋಗವು ಸೂಕ್ತವಾದ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಬೇಕಾಗಿದೆಯೆಂದು ನ್ಯಾಯವಾದಿ ಅಶ್ವಿನಿ ಕುಮಾರ್ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಕಾನೂನೊಂದನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಕೋರಿದ್ದಾರೆ.
‘‘ಚುನಾವಣೆಗಳ ಮೇಲೆ ಕಣ್ಣಿಟ್ಟು ಉಚಿತ ಕೊಡುಗೆಗಳನ್ನು ಘೋಷಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ರಾಜಕೀಯ ಪಕ್ಷಗಳ ನೂತನ ಪ್ರವೃತ್ತಿಯು ಪ್ರಜಾತಾಂತ್ರಿಕ ವೌಲ್ಯಗಳ ಉಳಿವಿಗೆ ದೊಡ್ಡ ಬೆದರಿಕೆಯಾಗಿದೆ ಮಾತ್ರವಲ್ಲ, ಸಂವಿಧಾನದ ಆಶಯಕ್ಕೂ ಹಾನಿಯುಂಟು ಮಾಡಿದೆ’’ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.





