ರ‍್ಯಾಲಿ, ರೋಡ್ ಶೋಗೆ ನಿಷೇಧ ಜ.31ರವರೆಗೆ ವಿಸ್ತರಣೆ: ಚು. ಆಯೋಗ

ಹೊಸದಿಲ್ಲಿ, ಜ.22: ದೇಶದಲ್ಲಿ ಕೋವಿಡ್19 ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಚುನಾವಣಾ ಆಯೋಗವು ಶನಿವಾರ ಎಲ್ಲಾ ಭೌತಿಕ ಚುನಾವಣಾ ಪ್ರಚಾರ ರ್ಯಾಲಿಗಳು ಹಾಗೂ ರೋಡ್ಶೋಗಳಿಗೆ ಹೇರಿದ್ದ ನಿಷೇಧವನ್ನು ಜನವರಿ 31ರವರೆಗೆ ವಿಸ್ತರಿಸಿದೆ.
ಆದಾಗ್ಯೂ ಒಳಾಂಗಣಗಳಲ್ಲಿ ವೈಯಕ್ತಿಕವಾಗಿ ಚುನಾವಣಾ ಪ್ರಚಾರ ನಡೆಸುವುದಕ್ಕೆ ಅನುಮತಿ ನೀಡಿದೆ. ಮೊದಲ ಹಂತದ ಚುನಾವಣೆಗಾಗಿ ಜನವರಿ 28ರಿಂದ ಹಾಗೂ 2ನೇ ಹಂತದ ಚುನಾವಣೆಗಾಗಿ ಫೆಬ್ರವರಿ 1ರಿಂದ ರಾಜಕೀಯ ಪಕ್ಷಗಳು ತೆರೆದ ಸ್ಥಳಗಳಲ್ಲಿ ಗರಿಷ್ಠ 500 ಮಂದಿಯೊಂದಿಗೆ ಭೌತಿಕಸಭೆಗಳನ್ನು ನಡೆಸಬಹುದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗವು ಶನಿವಾರ ಟ್ವೀಟ್ ಮಾಡಿದೆ.
ಮನೆಮನೆ ಪ್ರಚಾರಕ್ಕೆ ವಿಧಿಸಲಾಗಿದ್ದ ಐವರು ವ್ಯಕ್ತಿಗಳ ಮಿತಿಯನ್ನು 10 ವ್ಯಕ್ತಿಗಳಿಗೆ ವಿಸ್ತರಿಸಲಾಗಿದೆ. ಕೋವಿಡ್ ನಿರ್ಬಂಧಗಳೊಂದಿಗೆ ನಿಯೋಜಿತವಾದ ತೆರೆದ ಸ್ಥಳಗಳಲ್ಲಿ ವಿಡಿಯೋ ವ್ಯಾನ್ಗಳ ಮೂಲಕ ಪ್ರಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ವಿಡಿಯೋ ವ್ಯಾನ್ಗಳ ಮೂಲಕ ಪ್ರಚಾರಕ್ಕೆ ಗರಿಷ್ಠ 500 ವ್ಯಕ್ತಿಗಳ ಮಿತಿ ವಿಧಿಸಲಾಗಿದೆ ಅಥವಾ ಸಭಾ ಸಾಮರ್ಥ್ಯದ ಶೇ.50ರಷ್ಟು ಮಂದಿ ಪ್ರೇಕ್ಷಕರ ಉಪಸ್ಥಿತಿಗೆ ಅನುಮತಿ ನೀಡಲಾಗಿದೆ ಎಂದು ಚುನಾವಮಾ ಆಯೋಗವು ಟ್ವೀಟ್ ಮಾಡಿದೆ.







