ಭಾರತೀಯ ಮೂಲದ ಶ್ವೇತಭವನದ ಅಧಿಕಾರಿ ಮಜು ವರ್ಗೀಸ್ ಪದತ್ಯಾಗ

ಮಜು ವರ್ಗೀಸ್(photo:twitter/@Hofstra_Law)
ವಾಷಿಂಗ್ಟನ್, ಜ.22: ಶ್ವೇತಭವನದ ಸೇನಾ ವಿಭಾಗದ ನಿರ್ದೇಶಕರಾಗಿದ್ದ ಭಾರತೀಯ ಮೂಲದ ಮಜು ವರ್ಗೀಸ್ ವೈಯಕ್ತಿಕ ಕಾರಣಗಳಿಂದ ಪದತ್ಯಾಗ ಮಾಡಿರುವುದಾಗಿ ವರದಿಯಾಗಿದೆ.
ಶ್ವೇತಭವನ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿರುವುದು ಜೀವಮಾನದ ಗೌರವವಾಗಿದೆ. 2.5 ವರ್ಷದ ನನ್ನ ಪ್ರಯಾಣ ಈದಿನ ಮುಕ್ತಾಯಗೊಂಡಿರುವಾಗ ಭಾವೋದ್ವೇಗಗೊಂಡಿದ್ದೇನೆ. ಆರಂಭಿಕ ದಿನಗಳ ಕಠಿಣ ಪರಿಸ್ಥಿತಿಯ ಸಂದರ್ಭ ಬೆಸೆದುಕೊಂಡ ಸ್ನೇಹಕ್ಕಾಗಿ ಧನ್ಯವಾದಗಳು. ನಾವು ಎದುರಿಸಿದ ಎಲ್ಲಾ ಸವಾಲುಗಳ ನಡುವೆಯೂ ದೇಶಕ್ಕೆ ಸಂಭ್ರಮಾಚರಿಸುವ ಅವಕಾಶ ಮಾಡಿಕೊಟ್ಟ ಅಧ್ಯಕ್ಷ ಬೈಡನ್ರಿಗೆ ಮತ್ತು ನನಗೆ ಸೇವೆಸಲ್ಲಿಸಲು ಅವಕಾಶ ಮಾಡಿಕೊಟ್ಟದ್ದಕ್ಕೆ ಮತ್ತು ನನ್ನ ಕೆಲಸ, ಕರ್ತವ್ಯದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಶ್ವೇತಭವನ ಸೇನಾ ವಿಭಾಗದ ಸಹೋದ್ಯೋಗಿಗಳಿಗೆ ಆಭಾರಿಯಾಗಿದ್ದೇನೆ ಎಂದು ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಬೈಡನ್ ರ 2020ರ ಚುನಾವಣಾ ಪ್ರಚಾರಕಾರ್ಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವರ್ಗೀಸ್ ಬೈಡನ್ ಅವರು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದ ಉಸ್ತುವಾರಿ ನಿರ್ವಹಿಸಿದ್ದರು. ಜೋ ಬೈಡನ್ ಅವರ ನಿಕಟವರ್ತಿಯಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿದ ಬಳಿಕ ವರ್ಗೀಸ್ ಪದತ್ಯಾಗ ಮಾಡುತ್ತಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ವರ್ಗಿಸ್ ಅವರ ಸ್ಥಾನಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆ ಶ್ವೇತಭವನದ ಕಚೇರಿ ಯಾವುದೇ ಮಾಹಿತಿ ನೀಡಿಲ್ಲ ಎಂದು ವರದಿ ತಿಳಿಸಿದೆ.







