ಉ.ಪ್ರ.: ದ್ವಿತೀಯ ಹಂತದ ಚುನಾವಣೆ; 51 ಬಿಎಸ್ಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಲಕ್ನೋ (ಉತ್ತರಪ್ರದೇಶ), ಜ.22: ಉತ್ತರಪ್ರದೇಶ ವಿಧಾನಸಭೆಯ ಎರಡನೆ ಹಂತದ ಚುನಾವಣೆಗೆ 51 ಅಭ್ಯರ್ಥಿಗಳ ಪಟ್ಟಿಯನ್ನು ಬಹುಜನ ಸಮಾಜ ಪಕ್ಷ (ಬಿಎಸ್ಪಿ)ವು ಶನಿವಾರ ಬಿಡುಗಡೆಗೊಳಿಸಿದೆ.
ಲಕ್ನೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಮಾಯಾವತಿ ‘ಹರ್ ಪೋಲಿಂಗ್ ಬೂತ್ ಕೊ ಜೀತ್ನಾ ಹೈ, ಬಿಎಸ್ಪಿ ಕೊ ಸತ್ತಾ ಮೇ ಲಾನಾ ಹೈ’ ಎಂಬುದು ಈ ಸಲದ ಚುನಾವಣೆಗೆ ಪಕ್ಷದ ಘೋಷಣೆಯಾಗಲಿದೆ ಎಂದರು.
2007ರಲ್ಲಿ ಆದಂತೆ ಈ ಚುನಾವಣೆಯಲ್ಲಿಯೂ ಬಿಎಸ್ಪಿ ಸರಕಾರವನ್ನು ಅಧಿಕಾರಕ್ಕೆ ತರಲು ಪಕ್ಷದ ಕಾರ್ಯಕರ್ತರು ಕಠಿಣವಾಗಿ ಶ್ರಮಿಸಲಿದ್ದಾರೆಂಬ ಭರವಸೆಯನ್ನು ತಾನು ಹೊಂದಿರುವುದಾಗಿ ಅವರು ಹೇಳಿದರು.
‘‘ಕೋವಿಡ್19 ಶಿಷ್ಟಾಚಾರಗಳನ್ನು ಅನುಸರಿಸಿ ಚುನಾವಣಾ ಪ್ರಚಾರ ನಡೆಸುವಂತೆ ಕಾರ್ಯಕರ್ತರಿಗೆ ತಿಳಿಸಿದ್ದೇವೆ. ಕೊರೋನಾ ಹಾವಳಿಯ ಈ ಜಟಿಲ ಸಮಯದಲ್ಲಿ ತಮ್ಮ ಅಭ್ಯರ್ಥಿಗಳು ಗೆಲ್ಲುವಂತೆ ಕಾರ್ಯರ್ತರು ಶ್ರಮಿಸುವರೆಂಬ ಭರವಸೆ ನನಗಿದೆ ‘‘ಎಂದವರು ಹೇಳಿದರು.
ಜನವರಿ 15ರ ಆರಂಭದಲ್ಲಿ ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಮಾಯಾವತಿ ಪ್ರಕಟಿಸಿದ್ದರು. ಫೆಬ್ರವರಿ ಹತ್ತರಿಂದ ಆರಂಭಗೊಂಡು ಉತ್ತರಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯಲಿವೆ. ಫೆಬ್ರವರಿ 10ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ 11 ಜಿಲ್ಲೆಗಳಲ್ಲಿ ಹರಡಿರುವ 48 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಫೆಬ್ರವರಿ 10,14,20,23, 27 ಹಾಗೂ ಮಾರ್ಚ್3 ಮತ್ತು 7ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತಏಣಿಕೆ ನಡೆಯಲಿದೆ.







