ಜ.31ರ ಗಡಿನಾಡು ಹಬ್ಬದಲ್ಲಿ ಕವಿ, ಗಾಯಕರಿಗೆ ಅವಕಾಶ
ಮಂಗಳೂರು, ಜ.23: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗು ಮಂಜುನಾಥ್ ಎಜುಕೇಷನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ತಲಪಾಡಿ ಸಮೀಪ ಉಚ್ಚಿಲ ಸಂಕೊಳಿಗೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಜ.31ರಂದು ಬೆಳಗ್ಗೆ 10ಕ್ಕೆ ಗಡಿನಾಡು ಹಬ್ಬವನ್ನು ಆಯೋಜಿಸಲಾಗಿದೆ.
ಈ ಹಬ್ಬದಲ್ಲಿ ಕನ್ನಡ ಸಮೂಹ ಗೀತ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಮೂರು ಹಾಡುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಸಮೂಹವಾಗಿ ಕರೋಕೆ ಸಂಗೀತದಲ್ಲಿ ಹಾಡಬೇಕು. 5ರಿಂದ 9 ಮಂದಿ ಪಾಲ್ಗೊಳ್ಳಬಹುದು.
ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿದ ಎಲ್ಲಾ ತಂಡದ ಗಾಯಕ, ಗಾಯಕಿಯರಿಂದ ಜಯ ಭಾರತ ಜನನಿಯ ತನುಜಾತೆ ನಾಡಗೀತೆಯ ಸಮೂಹ ಗಾಯನ ಮೊಳಗಲಿದೆ. ಜೊತೆಗೆ ಬಹುಮಾನ, ಸ್ಮರಣಿಕೆ ಮತ್ತು ಪ್ರಶಂಸಾಪತ್ರ ನೀಡಲಾಗುವುದು.
ಕವಿಗಳು ನಾಡುನುಡಿಯ ಬಗ್ಗೆ ಕನ್ನಡ ಕವನ ವಾಚಿಸಬಹುದು, ಒಬ್ಬರಿಗೆ ಸಮಯ ಮಿತಿ ಮೂರು ನಿಮಿಷವಾಗಿದೆ. ಹೆಸರು ನೋಂದಣಿಗೆ ಜ.29 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ :9886510087ನ್ನು ಸಂಪರ್ಕಿಸಬಹುದು.