ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಪತ್ತೆ; ಉಡುಪಿಯಲ್ಲಿ ಸೋಂಕು ನಿಯಂತ್ರಿಸಲು ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮ
ಉಡುಪಿ, ಜ.23: ಗಡಿ ಜಿಲ್ಲೆಯಾಗಿರುವ ಶಿವಮೊಗ್ಗದಲ್ಲಿ ಈ ವರ್ಷ ಮೊದಲ ಮಂಗನ ಕಾಯಿಲೆ(ಕೆಎಫ್‌ಡಿ) ಪ್ರಕರಣ ಪತ್ತೆಯಾಗಿರು ವುದರಿಂದ ಉಡುಪಿ ಜಿಲ್ಲೆಯ ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.
2019ರ ಆರಂಭದಲ್ಲಿ ಜಿಲ್ಲೆಯಾದ್ಯಂತ ಆತಂಕ ಸೃಷ್ಠಿಸಿದ್ದ ಮಂಗನ ಕಾಯಿಲೆ ಯನ್ನು ಎದುರಿಸಲು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದೀಗ ಸನ್ನದ್ಧವಾಗಿದ್ದು, ಈ ಹಿಂದೆ ವೈರಸ್ ಕಂಡುಬಂದ ಗ್ರಾಮ ಗಳಲ್ಲಿ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೊದಲ ಬಾರಿ 2019ರಲ್ಲಿ ಕೆಎಫ್‌ಡಿ ವೈರಸ್ ಕಂಡುಬಂದ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಸಿದ್ಧಾಪುರ, ಹೊಸಂಗಡಿ, ಬೆಳ್ವೆ, ಆರ್ಡಿ, ಬಸ್ರೂರು, ಹೇರೂರು, ಕುಕ್ಕುಂದೂರು, ಕಂಡ್ಲೂರು, ಹಿರ್ಗಾನ, ಕೊಲ್ಲೂರಿನ ಗೊಳಿಹೊಳೆ ಪ್ರದೇಶಗಳಲ್ಲಿ ಇಲಾಖೆ ಸಾಕಷ್ಟು ಎಚ್ಚರ ವಹಿಸಿದೆ. ಆಶಾ ಕಾರ್ಯಕರ್ತರು ಮನೆಮನೆ ಭೇಟಿ ನೀಡಿ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ 2019ರಲ್ಲಿ 14 ಮಂಗಗಳಲ್ಲಿ ಹಾಗೂ ಬೈಂದೂರು ಮತ್ತು ವಂಡ್ಸೆಯ ಕೇರಾಡಿಯ ಇಬ್ಬರಲ್ಲಿ ಕೆಎಫ್‌ಡಿ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಂಕು ಪೀಡಿತ 11 ಪ್ರದೇಶಗಳ 43 ಸಾವಿರ ಮಂದಿಗೆ ಚುಚ್ಚುಮದ್ದು ನೀಡಲಾಗಿತ್ತು. ಆದರೆ ಅದರ ನಂತರ ಜಿಲ್ಲೆಯಲ್ಲಿ ಯಾವುದೇ ಮಂಗ ಅಥವಾ ಮಾನವರಲ್ಲಿ ಸೋಂಕು ಕಂಡುಬಾರದ ಹಿನ್ನೆಲೆಯಲ್ಲಿ ಈ ಚುಚ್ಚುಮದ್ದು ನೀಡಿರಲಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಸೀಮಿತವಾಗಿರುವ ಈ ಕಾಯಿಲೆ ಜನವರಿ ಯಿಂದ ಜೂನ್ ತಿಂಗಳ ಮಧ್ಯಾವಧಿಯಲ್ಲಿ ಹೆಚ್ಚು ಹರಡುತ್ತವೆ. ಸೋಂಕು ಪೀಡಿತ ಮಂಗ ಸತ್ತ ನಂತರ ಅದರ ಮೈಮೇಲಿದ್ದ ಉಣ್ಣೆ 60 ಮೀಟರ್ ವ್ಯಾಪ್ತಿಯಲ್ಲಿ ಬರುವ ಇತರರ ದೇಹಗಳಿಗೆ ಸೇರಿ ರೋಗ ಹರಡುವಂತೆ ಮಾಡುತ್ತದೆ. ಕಾಡಿಗೆ ಮೇಯಲು ತೆರಳಿದ ಜಾನುವಾರುಗಳ ಮೂಲಕವೂ ಉಣ್ಣಿಗಳು ಮನುಷ್ಯರನ್ನು ಕಚ್ಚಿ ರೋಗ ಹರಡುವಂತೆ ಮಾಡುತ್ತದೆ. ತೀವ್ರ ಜ್ವರ, ತಲೆನೋವು, ಮೈ ಕೈ ನೋವು, ಮೂಗು, ಬಾಯಿ ಅಥವಾ ದೇಹದ ಇತರ ಭಾಗಗಳಿಂದ ರಕ್ತಸ್ರಾವ ಈ ಕಾಯಿಲೆಯ ಲಕ್ಷ್ಮಣಗಳಾಗಿವೆ.
‘ಕಾಡಂಚಿನಲ್ಲಿ ವಾಸವಾಗಿರುವವರಲ್ಲಿ ಜ್ವರ ಹಾಗೂ ಇತರ ರೋಗ ಲಕ್ಷ್ಮಣಗಳು ಕಂಡುಬಂದರೆ ಕೂಡಲೇ ಪರೀಕ್ಷೆ ಮಾಡಿಕೊಳ್ಳ ಬೇಕು. ಅದೇ ರೀತಿ ಕ್ಷೇತ್ರ ದಲ್ಲಿರುವ ನಮ್ಮ ಕಾರ್ಯಕರ್ತರು ಕೂಡ ಯಾವುದೇ ಜ್ವರ ಇದ್ದರೂ ತಪಾಸಣೆ ಮಾಡಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತಿದ್ದಾರೆ. ಈ ಕಾಯಿಲೆ ಕುರಿತು ಜನರಿಗೆ ಮಾಹಿತಿಗಳನ್ನು ನೀಡಿ ಜಾಗೃತಿ ಮೂಡಿಸಲಾ ಗುತ್ತಿದೆ. ಕ್ಷೇತ್ರ ಭೇಟಿಯ ಸಂದರ್ಭದಲ್ಲೂ ನಾವು ಅದನ್ನು ಮಾಡುತ್ತಿದ್ದೇವೆ. ಈ ಕಾಯಿಲೆ ಬಗ್ಗೆ ಯಾವುದೇ ರೀತಿಯಲ್ಲಿ ಭೀತಿ ಪಡಬೇಕಾದ ಅಗತ್ಯ ಇಲ್ಲ. ಆದರೆ ಜಾಗೃತೆ ವಹಿಸುವುದು ಅಗತ್ಯವಾಗಿದೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಮಂಗನ ಸಾವು ವರದಿಯಾಗಿಲ್ಲ: ಡಿಎಚ್ಓ
ಮಂಗನ ಸಾವಿನ ಬಗ್ಗೆಯೂ ಕಣ್ಗಾವಲು ವಹಿಸಲಾಗಿದೆ. ಎಲ್ಲಿಯಾದರೂ ಮಂಗನ ಸಾವು ಕಂಡುಬಂದರೆ ತಕ್ಷಣವೇ ಅರಣ್ಯ, ಪಶುಸಂಗೋಪನೆ, ಪಂಚಾ ಯತ್‌ರಾಜ್ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗುತ್ತದೆ. ತಕ್ಷಣ ಮಂಗನ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿ ವಿಸೇರಾವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗು ವುದು. ಈವರೆಗೆ ನಮ್ಮ ಜಿಲ್ಲೆ ಯಲ್ಲಿ ಯಾವುದೇ ಮಂಗನ ಸಾವು ಪ್ರಕರಣ ವರದಿಯಾಗಿಲ್ಲ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಮಂಗನ ಸಾವಿನ ಪ್ರಕರಣ ಕಂಡುಬಂದರೆ ಮೊದಲು ಸ್ಥಳ ಗುರುತಿಸಿ ಅಲ್ಲಿ ಸ್ಪ್ರೇ ಮಾಡಿ ಬಫರ್ ರೆನ್ ಮಾಡಲಾಗುತ್ತದೆ. ಕಳೆದ ವರ್ಷ ಇದೇ ರೀತಿ ಮಾಡಿರುವುದರಿಂದ ಈ ಕಾಯಿಲೆ ನಮ್ಮಲ್ಲಿ ನಿಯಂತ್ರಣಕ್ಕೆ ಬಂದಿದೆ. ಒಂದು ವರ್ಷ ನಮ್ಮಲ್ಲಿ ಯಾವುದೇ ಪ್ರಕರಣಗಳು ಕಂಡುಬಾರದಿದ್ದರೆ ಮುಂದಿನ ವರ್ಷ ಚುಚ್ಚುಮದ್ದು ನೀಡಬೇಕೆ ಬೇಡವೇ ಎಂಬುದರ ಬಗ್ಗೆ ಚಿಂತನೆ ಮಾಡಬೇಕಾಗು ತ್ತದೆ. ಹಾಗಾಗಿ ಕಳೆದ ವರ್ಷ ನಮ್ಮಲ್ಲಿ ಯಾವುದೇ ಮಂಗನ ಸಾವು ಮತ್ತು ಕೆಎಫ್‌ಡಿ ಸೋಂಕು ಪ್ರಕರಣಗಳು ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.