ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್‌ಗೆ ಶೇಣಿ ಪ್ರಶಸ್ತಿ ಪ್ರದಾನ

ಮಂಗಳೂರು, ಜ.23: ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲಲಿತ ಕಲಾ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರ, ಸುರತ್ಕಲ್ ಗೋವಿಂದದಾಸ ಕಾಲೇಜು, ಯಕ್ಷಗಾನ ಅಕಾಡಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಜರುಗಿದ ಶೇಣಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ರವಿವಾರ ಶೇಣಿ ಪ್ರಶಸ್ತಿ-2021ನ್ನು ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್‌ಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುಂಬ್ಳೆ ಸುಂದರರಾವ್ ಶೇಣಿಯವರ ಹೆಸರಿನ ಈ ಪ್ರಶಸ್ತಿಗೆ ನಾನೆಷ್ಟು ಅರ್ಹನೋ ಎಂಬುದು ಗೊತ್ತಿಲ್ಲ. ಆದರೆ ಅವರೊಂದಿಗೆ ಗುರುತಿಸಲ್ಪಡುವುದಕ್ಕೆ ಹೆಮ್ಮೆಯಿದೆ. ನಾನು ಶಾಸಕನಾಗಿದ್ದ, ಮೇಳದ ಕಲಾವಿದನಾಗಿದ್ದ ಸುರತ್ಕಲ್‌ನಲ್ಲಿಯೇ ಪ್ರಶಸ್ತಿ, ಗೌರವ ಪಡೆಯುತ್ತಿರುವುದು ಹೆಮ್ಮೆ ತಂದಿದೆ. ಅವರಿಂದಲೇ ಕೊಡಲ್ಪಟ್ಟಿದ್ದೆಂದು ಭಾವಿಸುತ್ತೇನೆ ಎಂದರು.
ಯಕ್ಷಗಾನ ಅಕಾಡಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಶೇಣಿಯವರೊಂದಿಗೆ ಅರ್ಥ ಹೇಳುವ ಅವಕಾಶ ನನಗೂ ಒಮ್ಮೆ ಒದಗಿ ಬಂದಿತ್ತು ಎನ್ನುವುದು ಹೆಮ್ಮೆಯ ವಿಚಾರ. ಕುಂಬ್ಳೆ ಸುಂದರ ರಾವ್‌ರನ್ನು ಶೇಣಿಯವರು ಪ್ರೀತಿ ಅಭಿಮಾನದಿಂದ ‘ನಮ್ಮ ಸುಂದರ’ ಎಂದು ಕರೆಯುತ್ತಿದ್ದರು. ಅಪೇಕ್ಷೆ ಪಡದೆ ಅಧ್ಯಕ್ಷ ಸ್ಥಾನ ಸಿಕ್ಕಿದ್ದು, ಅದನ್ನು ಉಪೇಕ್ಷೆ ಮಾಡದೆ ಕ್ಷೇತ್ರದ ಬೆಳವಣಿಗೆ ಉಪಯೋಗಿಸುವೆ ಎಂದರು.
ಟ್ರಸ್ಟ್‌ನ ಅಧ್ಯಕ್ಷ ಎಂ.ಆರ್.ವಾಸುದೇವ ಅಧ್ಯಕ್ಷೆತೆ ವಹಿಸಿದ್ದರು. ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಿದರು. ಕಸ್ತೂರಿ ಅರುಣ ಪೈ ಶೇಣಿ ಸಂಸ್ಮರಣೆ ಮಾಡಿದರು. ಯಕ್ಷಗಾನ ಅಕಾಡಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಎಸ್.ಎನ್. ಭಟ್ ಸನ್ಮಾನ ಪತ್ರ ವಾಚಿಸಿದರು.
ಮುಖವರ್ಣಿಕೆ ಸ್ಪರ್ಧೆ ಹಾಗೂ ಪೌರಾಣಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿಗಳಾದ ಅಗರಿ ರಾಘವೇಂದ್ರ ರಾವ್, ಶ್ರೀಪತಿ ಭಟ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಜಿ.ಕೆ.ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.