ಸಿರಿಯಾ: ಜೈಲಿನ ಮೇಲೆ ಐಸಿಸ್ ದಾಳಿ; ಘರ್ಷಣೆಯಲ್ಲಿ 120ಕ್ಕೂ ಅಧಿಕ ಮಂದಿ ಮೃತ್ಯು

ಸಿರಿಯಾ ಜೈಲು(photo:twitter)
ದಮಾಸ್ಕಸ್, ಜ.23: ಸಿರಿಯಾದ ಜೈಲಿನ ಮೇಲೆ ನಡೆದ ದಾಳಿಯ ಬಳಿಕ ಅಮೆರಿಕ ಬೆಂಬಲಿತ, ಕುರ್ಡಿಶ್ ನೇತೃತ್ವದ ಪಡೆ ಹಾಗೂ ಐಸಿಸ್ ಉಗ್ರರ ಮಧ್ಯೆ ನಡೆದ ಘರ್ಷಣೆಯಲ್ಲಿ ಕನಿಷ್ಟ 120 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಘರ್ಷಣೆಯಲ್ಲಿ ಕನಿಷ್ಟ 77 ಐಸಿಸ್ ಸದಸ್ಯರು, 39 ಕುರ್ಡಿಶ್ ಯೋಧರು, ಆಂತರಿಕ ಭದ್ರತಾ ಪಡೆ, ಜೈಲು ಸಿಬ್ಬಂದಿ, ಭಯೋತ್ಪಾದನಾ ನಿಗ್ರಹ ಪಡೆಯ ಸಿಬ್ಬಂದಿ ಹತರಾಗಿದ್ದಾರೆ . 7 ಮಂದಿ ನಾಗರಿಕರೂ ಮೃತರಾಗಿದ್ದಾರೆ ಎಂದು ಬ್ರಿಟನ್ ಮೂಲದ ಮಾನವಹಕ್ಕು ವೀಕ್ಷಕರು ಹೇಳಿದ್ದಾರೆ. ಜೈಲಿನ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತಿರುವ ಐಸಿಸ್ , ಹಸಾಕೆ ನಗರದ ಘ್ವಾಯ್ರಾನ್ ಜೈಲಿನತ್ತ ನುಗ್ಗುತ್ತಿರುವ ಐಸಿಸ್ ಧ್ವಜ ಹಿಡಿದ ಸಶಸ್ತ್ರ ಸದಸ್ಯರ ಕುರಿತ ವೀಡಿಯೊವನ್ನು ಶನಿವಾರ ಬಿಡುಗಡೆಗೊಳಿಸಿದೆ.
ಉಗ್ರರು ಜೈಲಿನ ಮುಖ್ಯದ್ವಾರದ ಬಳಿ ಕಾರ್ ಬಾಂಬ್ ಸ್ಫೋಟಿಸಿದಾಗ ಜೈಲಿನ ಬಾಗಿಲು ಮುರಿದುಬಿತ್ತು ಮತ್ತು 100ಕ್ಕೂ ಅಧಿಕ ಕೈದಿಗಳು ಪರಾರಿಯಾದರು . ಅವರಲ್ಲಿ 104 ಮಂದಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಇನ್ನೂ ಕೆಲವರು ನಾಪತ್ತೆಯಾಗಿದ್ದು ಅವರನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮುಂದುವರಿದಿದೆ. ಈ ಪ್ರದೇಶದ ಮೇಲೆ ಕುರ್ಡಿಶ್ ನೇತೃತ್ವದ ಸಿರಿಯನ್ ಡೆಮೊಕ್ರಾಟಿಕ್ ಫೋರ್ಸ್(ಎಸ್ಡಿಎಫ್)ನ ಹಿಡಿತ ಬಲಗೊಂಡಿದೆ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ.





