ಪ್ರಚೋದನಕಾರಿ ಭಾಷಣದ ಆರೋಪ: ಸಿಧು ಸಲಹೆಗಾರ ಮುಸ್ತಫಾ ವಿರುದ್ಧ ಎಫ್ಐಆರ್

Image courtesy: Indian express
ಚಂಡೀಗಢ, ಜು.2: ಪಂಜಾಬ್ನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಅವರ ಸಲಹೆಗಾರ, ಪಂಜಾಬ್ನ ಮಾಜಿ ಪೊಲೀಸ್ ಮಹಾನಿರ್ದೇಶಕ ಮುಹಮ್ಮದ್ ಮುಸ್ತಫಾ, ಅವರು ಕಳೆದ ವಾರ ಮಲೇರ್ ಕೋಟಾದಲ್ಲಿ ತನ್ನ ಪತ್ನಿ, ಸಚಿವೆ ರಝಿಯಾ ಸುಲ್ತಾನಾ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿ ರವಿವಾರ ಎಫ್ಐಆರ್ ದಾಖಲಿಸಲಾಗಿದೆ.
ಧರ್ಮ,ಜನಾಂಗ, ಭಾಷೆ ಇತ್ಯಾದಿ ವಿಷಯಗಳ ಬಗ್ಗೆ ವಿವಿಧ ಗುಂಪುಗಳ ನಡುವೆ ಅಸೌಹಾರ್ದತೆ,ಶತ್ರುತ್ವ ಹಾಗೂ ದ್ವೇಷದ ಭಾವನೆಯನ್ನು ಪ್ರಚೋದಿಸಿದ ಆರೋಪದಲ್ಲಿ ಅವರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 153ಎ ಹಾಗೂ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮುಹಮ್ಮದ್ ಮುಸ್ತಫಾ ಮಾಡಿದ್ದರೆನ್ನಲಾದ ಪ್ರಚೋದನಕಾರಿ ಭಾಷಣದ ವಿಡಿಯೋ ತುಣುಕಿಗೆ ಸಂಬಂಧಿಸಿ ಮಾಲೇರ್ಕೋಟಾ ಸಬ್ಇನ್ಸ್ಪೆಕ್ಟರ್ ನೀಡಿರುವ ಹೇಳಿಕೆಯ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಪಂಜಾಬ್ನ ಏಕೈಕ ಮುಸ್ಲಿಂ ಬಾಹುಳ್ಯದ ವಿಧಾನಸಭಾ ಕ್ಷೇತ್ರವಾದ ಮಾಲೇರ್ಕೋಟಾದಲ್ಲಿ ಶನಿವಾರ ಮುಸ್ತಫಾ ಮಾಡಿದ್ದರೆನ್ನಲಾದ ವಿವಾದಾತ್ಮಕ ಭಾಷಣವು ರಾಜ್ಯದ ರಾಜಕೀಯದಲ್ಲಿ ಬಿರುಗಾಳಿಯನ್ನೆಬ್ಬಿಸಿತ್ತು. ಈ ವಿವಾದಾತ್ಮಕ ಭಾಷಣಕ್ಕೆ ಸಂಬಂಧಿಸಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಆಪ್ ಪಕ್ಷಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು ಚುನಾವಣೆಗೆ ಮುಂಚಿತವಾಗಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ವಿರುದ್ಧವಾಗಿದೆ ಎಂದು ಹೇಳಿವೆ. ಆದಾಗ್ಯೂ ವಿವಾದಾತ್ಮಕ ಭಾಷಣಕ್ಕೆ ಸಂಬಂಧಿಸಿ ಪಂಜಾಬ್ ಕಾಂಗ್ರೆಸ್ ಈವರೆಗೆ ಯಾವುದೇ ಹೇಳಿಕೆಯನ್ನು ಬಿಡುಗಡೆಗೊಳಿಸಿಲ್ಲ.







