ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ಕ್ಲೀನ್ಸ್ವೀಪ್ ಸಾಧಿಸಿದ ದಕ್ಷಿಣ ಆಫ್ರಿಕಾ
ಮೂರನೇ ಏಕದಿನ ಪಂದ್ಯದಲ್ಲಿ 4 ರನ್ನಿಂದ ರೋಚಕ ಜಯ
Photo: AFP
ಕೇಪ್ಟೌನ್, ಜ.23: ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ ಶತಕ, ಮಧ್ಯಮ ಕ್ರಮಾಂಕದ ರಾಸ್ಸಿ ವಾನ್ಡರ್ ಡುಸ್ಸೆನ್ ಅರ್ಧಶತಕ ಹಾಗೂ ಬೌಲರ್ಗಳ ಸಾಂಘಿಕ ಪ್ರದರ್ಶನದದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 4 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ.ಈ ಮೂಲಕ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಕ್ಲೀನ್ಸ್ವೀಪ್ ಸಾಧಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಭಾರತ 49.2 ಓವರ್ಗಳಲ್ಲಿ 283 ರನ್ ಗಳಿಸಿ ಆಲೌಟಾಯಿತು.
ಭಾರತವು ನಾಯಕ ಕೆ.ಎಲ್.ರಾಹುಲ್(9) ವಿಕೆಟನ್ನು ಬೇಗನೆ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಎರಡನೇ ವಿಕೆಟ್ಗೆ 98 ರನ್ ಜೊತೆಯಾಟ ನಡೆಸಿದರು. 58 ಎಸೆತಗಳಲ್ಲಿ 50 ರನ್ ಪೂರೈಸಿದ ಧವನ್ ಸರಣಿಯಲ್ಲಿ 2ನೇ ಅರ್ಧಶತಕ ಗಳಿಸಿದರು. ಧವನ್(61,73 ಎಸೆತ, 5 ಬೌಂ.1 ಸಿ.)ವಿಕೆಟನ್ನು ಉರುಳಿಸಿದ ಫೆಹ್ಲುಕ್ವಾವೊ ಈ ಜೋಡಿಯನ್ನು ಬೇರ್ಪಡಿಸಿದರು.
ಧವನ್ ಔಟಾದ ಬೆನ್ನಿಗೇ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್(0)ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಯಾದವ್ರೊಂದಿಗೆ 4ನೇ ವಿಕೆಟ್ಗೆ 38 ರನ್ ಜೊತೆಯಾಟ ನಡೆಸಿದ ಕೊಹ್ಲಿ 63 ಎಸೆತಗಳಲ್ಲಿ 64ನೇ ಅರ್ಧಶತಕ ಗಳಿಸಿದರು. ಆದರೆ ಕೊಹ್ಲಿಯವರ ಇನಿಂಗ್ಸ್ಗೆ(65 ರನ್, 84 ಎಸೆತ, 5 ಬೌಂ.)ಕೇಶವ ಮಹಾರಾಜ್ ತೆರೆ ಎಳೆದರು.
ಆಲ್ರೌಂಡರ್ ದೀಪಕ್ ಚಹಾರ್(54 ರನ್, 34 ಎಸೆತ, 5 ಬೌಂಡರಿ, 2 ಸಿಕ್ಸರ್)ವೃತ್ತಿಜೀವನದಲ್ಲಿ 2ನೇ ಅರ್ಧಶತಕವನ್ನು ಗಳಿಸಿದರು. ಬೌಲರ್ ಜಸ್ಪ್ರೀತ್ ಬುಮ್ರಾ ಅವರೊಂದಿಗೆ 8ನೇ ವಿಕೆಟ್ಗೆ 55 ರನ್ ಜೊತೆಯಾಟ ನಡೆಸಿದ ಚಹಾರ್ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದರು. ಚಹಾರ್ ವಿಕೆಟ್ ಕಬಳಿಸಿದ ವೇಗದ ಬೌಲರ್ ಎನ್ಗಿಡಿ(3-58) ಭಾರತಕ್ಕೆ ಗೆಲುವು ನಿರಾಕರಿಸಿದರು.
ದ. ಆಫ್ರಿಕಾ ಪರ ಎನ್ಗಿಡಿ ಹಾಗೂ ಫೆಹ್ಲುಕ್ವಾಯೊ(3-40)ತಲಾ ಮೂರು ವಿಕೆಟ್ಗಳನ್ನು ಪಡೆದರು. ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟಿದ್ದ ದಕ್ಷಿಣ ಆಫ್ರಿಕಾ 49.5 ಓವರ್ಗಳಲ್ಲಿ 287 ರನ್ಗೆ ಸರ್ವಪತನಗೊಂಡಿತು.