ಕ್ಯಾಮರೂನ್: ನೈಟ್ ಕ್ಲಬ್ ನಲ್ಲಿ ಬೆಂಕಿ ಅನಾಹುತ; ಕನಿಷ್ಟ 16 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಯಾಂಡೆ, ಜ.23: ಕ್ಯಾಮರೂನ್ನ ರಾಜಧಾನಿ ಯಾಂಡೆಯ ಜನಪ್ರಿಯ ನೈಟ್ಕ್ಲಬ್ನಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕನಿಷ್ಟ 16 ಮಂದಿ ಮೃತಪಟ್ಟಿರುವುದಾಗಿ ಸರಕಾರ ಹೇಳಿದೆ.
ಬಾಸ್ಟೋಸ್ ಜಿಲ್ಲೆಯ ಲಿವ್ಸ್ ನೈಟ್ಕ್ಲಬ್ನ ಮುಖ್ಯ ಸಭಾಂಗಣದಲ್ಲಿ ಸುಡುಮದ್ದು ಸಿಡಿಸಿದಾಗ ಕಾಣಿಸಿಕೊಂಡ ಬೆಂಕಿ ಅಡುಗೆ ಅನಿಲದ ಸಿಲಿಂಡರ್ ದಾಸ್ತಾನಿರಿಸಿದ್ದ ಕೋಣೆಗೆ ವ್ಯಾಪಿಸಿದೆ. ಅಲ್ಲಿನ ಚಾವಣಿಗೆ ಬೆಂಕಿ ಹತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿದಾಗ ಜನ ದಿಕ್ಕಾಪಾಲಾಗಿ ಓಡಿದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ಸರಕಾರದ ವಕ್ತಾರ ರೆನ್ ಇಮ್ಯಾನುವೆಲ್ ಸಾದಿ ರವಿವಾರ ಹೇಳಿದ್ದಾರೆ.
ದುರಂತದಲ್ಲಿ ಕನಿಷ್ಟ 16 ಮಂದಿ ಮೃತಪಟ್ಟು ಇತರ 8 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಯಾಂಡೆಯ ಪ್ರಧಾನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಸಚಿವಾಲಯ ಹೇಳಿದೆ.
ಕ್ಯಾಮರೂನ್ನಲ್ಲಿ ನಡೆಯುತ್ತಿರುವ ಮಾಂಥ್ಲಾಂಗ್ ಆಫ್ರಿಕನ್ಫುಟ್ಬಾಲ್ ಕಪ್ ನೇಷನ್ಸ್ ಟೂರ್ನಿಯ ಹಿನ್ನೆಲೆಯಲ್ಲಿ ಆಫ್ರಿಕಾ ಖಂಡದ 24 ದೇಶಗಳ ಫುಟ್ಬಾಲ್ ಆಟಗಾರರು, ಬೆಂಬಲಿಗರು, ಮ್ಯಾಚ್ ರೆಫ್ರೀ, ಅಧಿಕಾರಿಗಳು ಯಾಂಡೆಯಲ್ಲಿದ್ದು ನೈಟ್ಕ್ಲಬ್ನಲ್ಲಿ ವಿಪರೀತ ಜನಸಂದಣಿ ಸೇರಿತ್ತು ಎಂದು ಭದ್ರತಾ ಸಿಬಂದಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಆಟಗಾರರ ಸುರಕ್ಷತೆಯನ್ನು ಖಾತರಿಪಡಿಸಲಾಗುವುದು. ಯಾರೂ ಭಯಪಡಬೇಕಿಲ್ಲ. ಶಾಂತರೀತಿಯಿಂದ ವರ್ತಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕು. ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ಕ್ಯಾಮರೂನ್ ಅಧ್ಯಕ್ಷ ಪೌಲ್ ಬಿಯಾ ಹೇಳಿದ್ದಾರೆ.







