ಟರ್ಕಿ: ಅಧ್ಯಕ್ಷರನ್ನು ಅವಮಾನಿಸಿದ ಆರೋಪದಲ್ಲಿ ಪತ್ರಕರ್ತೆಯ ಬಂಧನ

ಸಿದೆಫ್ ಕಬಾಸ್(photo:twitter/@SedefKabas)
ಅಂಕಾರಾ, ಜ.23: ಅಧ್ಯಕ್ಷ ರಿಸೆಪ್ ತಯೀಪ್ ಎರ್ಡೋಗನ್ ರನ್ನು ಅವಮಾನಿಸಿದ ಆರೋಪದಡಿ ಪ್ರಮುಖ ಪತ್ರಕರ್ತೆ ಸಿದೆಫ್ ಕಬಾಸ್ರನ್ನು ವಿಚಾರಣೆ ಬಾಕಿಯಿರಿಸಿ ಜೈಲಿಗೆ ಹಾಕುವಂತೆ ಟರ್ಕಿಯ ನ್ಯಾಯಾಲಯ ಆದೇಶಿಸಿದೆ.
ಇದರನ್ವಯ ಪೊಲೀಸರು ಶನಿವಾರ ಬೆಳಿಗ್ಗೆ ಕಬಾಸ್ರನ್ನು ಬಂಧಿಸಿ ಇಸ್ತಾನ್ಬುಲ್ನ ಪ್ರಧಾನ ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ ನಗರದ ಪ್ರಧಾನ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಬಂಧನವನ್ನು ಸಮರ್ಥಿಸಿದೆ ಎಂದು ವರದಿಯಾಗಿದೆ. ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮತ್ತು ಟ್ವಿಟರ್ ಖಾತೆಯಲ್ಲಿ ಅಧ್ಯಕ್ಷರು ಮತ್ತು ರಾಜಭವನಕ್ಕೆ ಸಂಬಂಧಿಸಿ ಕಬಾಸ್ ನೀಡಿದ ಹೇಳಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ‘ಒಂದು ಎತ್ತು ಅರಮನೆಯ ಸಿಂಹಾಸನಕ್ಕೆ ಏರಿದರೆ ಅದು ದೊರೆಯಾಗುವುದಿಲ್ಲ, ಆದರೆ ಅರಮನೆ ಕೊಟ್ಟಿಗೆಯಾಗುತ್ತದೆ’ ಎಂದು ಕಬಾಸ್ ಟ್ವೀಟ್ ಮಾಡಿದ್ದರು.
ಈ ಹೇಳಿಕೆಯನ್ನು ಟರ್ಕಿಯ ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಖ್ಯಸ್ಥ ಫಹ್ರೆಟಿನ್ ಅಲ್ಟನ್ ಖಂಡಿಸಿದ್ದಾರೆ. ಅಧ್ಯಕ್ಷರ ಭವನದ ಗೌರವವು ನಮ್ಮ ದೇಶದ ಗೌರವವಾಗಿದೆ. ನಮ್ಮ ಅಧ್ಯಕ್ಷರು ಮತ್ತು ರಾಜಭವನದ ವಿರುದ್ಧ ಮಾಡಿರುವ ಅಸಭ್ಯ ಅವಮಾನವನ್ನು ಖಂಡಿಸುತ್ತೇನೆ ಎಂದವರು ಟ್ವೀಟ್ ಮಾಡಿದ್ದಾರೆ. ಕಬಾಸ್ ಹೇಳಿಕೆಯನ್ನು ಸಾಮಾಜಿಕ ನ್ಯಾಯ ಇಲಾಖೆಯ ಸಚಿವ ಅಬ್ದುಲ್ ಹಮೀದ್ ಗುಲ್ ಖಂಡಿಸಿದ್ದು ‘ಅವರ ಕಾನೂನುಬಾಹಿರ ಪದಗಳಿಗಾಗಿ ಅವರಿಗೆ ತಕ್ಕಶಾಸ್ತಿ ಆಗಲಿದೆ ಎಂದಿದ್ದಾರೆ.







