ಸುಳ್ಳು ವಿಚಾರ ಹೇಳಿ ಸತ್ಯವನ್ನು ಮರೆಮಾಚಬೇಡಿ; ಹರಿಕೃಷ್ಣ ಬಂಟ್ವಾಳ ವಿರುದ್ಧ ಐವನ್ ಡಿಸೋಜಾ ಆಕ್ಷೇಪ

ಮಂಗಳೂರು, ಜ.24: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ಕುರಿತು ಪಕ್ಷದ ನಾಯಕರು ಪ್ರಶ್ನಿಸಿ ಅವಕಾಶ ನೀಡಲು ಕೇಂದ್ರವನ್ನು ಕೋರುವಂತೆ ಸಲಹೆ ಮಾಡಿದ್ದೆ. ಅದಕ್ಕೆ ಉತ್ತರ ನೀಡುವುದು ಬಿಟ್ಟು ಸತ್ಯವನ್ನು ಮರೆಮಾಚಿ ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಸುಳ್ಳು ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಆಕ್ಷೇಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡುತ್ತಾ ಈ ಆಕ್ಷೇಪ ಮಾಡಿದ ಅವರು, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಬಿಜೆಪಿ ನಾಯಕರು ತಪ್ಪನ್ನು ಸರಿ ಮಾಡುವುದನ್ನು ಬಿಟ್ಟು ವಿಷಯಾಂತರ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷದ ನಾಯಕರು, ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸುನಿಲ್ ಕುಮಾರ್ ಈ ಬಗ್ಗೆ ಸರಕಾರವನ್ನು ಪ್ರಶ್ನಿಸಿ ಸಲಹೆ ನೀಡಲು ಆಗದಿದ್ದರೆ ರಾಜೀನಾಮೆ ನೀಡುವಂತೆ ಕೇಳಿದ್ದೆ.
ಆದರೆ ಹರಿಕೃಷ್ಣ ಬಂಟ್ವಾಳ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, 'ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಿದ್ಧರಾಮಯ್ಯನವರು ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡದಂತೆ ಐವನ್ ಡಿಸೋಜಾ ತಡೆದಿರುವುದಾಗಿ ಆರೋಪಿಸಿದ್ದಾರೆ'. ನಾನು ಹೇಳಿದರೆ ಸಿದ್ಧರಾಮಯ್ಯನವರು ಕೇಳುತ್ತಾರೆಯೇ ? ಅವರು ಪ್ರಸಕ್ತ ವಿಪಕ್ಷ ನಾಯಕರು. ತಾಕತ್ತಿದ್ದರೆ ವಿಧಾನಸಭೆಯಲ್ಲಿ ಅವರಲ್ಲಿ ಈ ಬಗ್ಗೆ ಪ್ರಶ್ನಿಸಲಿ ಎಂದು ಐವನ್ ಅವರು ಹರಿಕೃಷ್ಣ ಬಂಟ್ವಾಳರಿಗೆ ಸವಾಲೆಸೆದಿದ್ದಾರೆ.