ಉಡುಪಿ ಜಿಲ್ಲೆ : 677 ಮಂದಿಗೆ ಕೋವಿಡ್ ಪಾಸಿಟಿವ್; ಮೂವರು ಮಹಿಳೆಯರು ಮೃತ್ಯು
ದಿನದಲ್ಲಿ 1502 ಮಂದಿ ಸೋಂಕಿನಿಂದ ಗುಣಮುಖ

ಉಡುಪಿ, ಜ.24: ಸೋಮವಾರ ಜಿಲ್ಲೆಯಲ್ಲಿ ಒಟ್ಟು 1502 ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೂ ದಿನದಲ್ಲಿ ಒಟ್ಟು 677 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 5718ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಜಿಲ್ಲೆಯ ಮೂವರು ಹಿರಿಯ ಮಹಿಳೆಯರು ಕೋವಿಡ್-19ರಿಂದ ಮೃತಪಟ್ಟಿದ್ದಾರೆ.ಉಡುಪಿ ತಾಲೂಕಿನ 98 ಹಾಗೂ 69 ಅಲ್ಲದೇ ಕಾರ್ಕಳ ತಾಲೂಕಿನ 72 ವರ್ಷ ಪ್ರಾಯದ ಮಹಿಳೆಯರು ಸೋಂಕಿನಿಂದ ಮೃತಪಟ್ಟಿದ್ದು, ಇವರೆಲ್ಲರೂ ತೀವ್ರವಾದ ಕೊರೋನ ಗುಣಲಕ್ಷಣದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಬಲಿಯಾದವರ ಸಂಖ್ಯೆ 486ಕ್ಕೇರಿದೆ.
ಮೃತಪಟ್ಟ ಮೂವರಲ್ಲಿ ಕಾರ್ಕಳದ 72ರ ಹರೆಯದ ಮಹಿಳೆ ಜ.21ಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದು, ಇಂದು ಮೃತಪಟ್ಟರೆ, ಉಳಿದವರಿಬ್ಬರು 22ರಂದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಅದೇ ದಿನ ಮೃತಪಟ್ಟಿದ್ದರು. ಎಲ್ಲರೂ ಜ್ವರ, ಶೀತ, ಕೆಮ್ಮುವಿನಿಂದ ಬಳಲುತಿದ್ದರು.
ಇಂದು ಪಾಸಿಟಿವ್ ಬಂದ 677 ಮಂದಿಯಲ್ಲಿ 311 ಮಂದಿ ಪುರುಷರು ಹಾಗೂ 366 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 500 ಮಂದಿ ಉಡುಪಿ ತಾಲೂಕಿಗೆ ಸೇರಿದವರು. ಕುಂದಾಪುರ ತಾಲೂಕಿನ 135 ಹಾಗೂ ಕಾರ್ಕಳ ತಾಲೂಕಿನ 41 ಮಂದಿಯೊಂದಿಗೆ ಹೊರಜಿಲ್ಲೆಯ ಒಬ್ಬು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ 33 ಮಂದಿಯನ್ನು ಕೋವಿಡ್ ಕೇರ್ ಸೆಂಟರ್‌ಗೂ, ಆರು ಮಂದಿಯನ್ನು ಕೋವಿಡ್ ಆಸ್ಪತ್ರೆಗೂ, 11 ಮಂದಿಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿದ್ದು, ಉಳಿದ 627 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಜಿಲ್ಲೆಯಲ್ಲಿ ಒಟ್ಟು 174 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು ಇವರಲ್ಲಿ 9 ಮಂದಿ ವೆಂಟಿಲೇಟರ್, 24 ಮಂದಿ ಐಸಿಯು ಹಾಗೂ 36 ಮಂದಿ ಎಚ್‌ಡಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ರವಿವಾರ 1502 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನ ದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 4562ಕ್ಕೇರಿದೆ. ನಿನ್ನೆ ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 3004 ಮಂದಿ, ಕುಂದಾಪುರದಲ್ಲಿ 524 ಹಾಗೂ ಕಾರ್ಕಳ ತಾಲೂಕಿನ 584 ಮಂದಿ ಸೇರಿದಂತೆ ಒಟ್ಟು 4112 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 10139ಕ್ಕೇರಿದೆ.
1225 ಮಂದಿಗೆ ಮುನ್ನೆಚ್ಚರಿಕೆ ಡೋಸ್: ಜಿಲ್ಲೆಯಲ್ಲಿ ಇಂದು ಒಟ್ಟು 1225 ಮಂದಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟವರಿಗೆ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 60 ವರ್ಷಕ್ಕೂ ಮೇಲ್ಪಟ್ಟ 971 ಮಂದಿ ಲಸಿಕೆ ಪಡೆದರೆ, 216 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 38 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಸೇರಿದ್ದಾರೆ.
1026 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 1026 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 30 ಮಂದಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲಾಗಿದೆ. ಒಟ್ಟಾರೆಯಾಗಿ ದಿನದಲ್ಲಿ 233 ಮಂದಿ ಮೊದಲ ಡೋಸ್ ಹಾಗೂ 793 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದ್ದಾರೆ.
409 ಮಂದಿ 0-25ವರ್ಷದವರು
ಇಂದು ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬಂದವರಲ್ಲಿ ಆರು ಮಂದಿ ಐದು ವರ್ಷದೊಳಗಿನ ಮಕ್ಕಳು ಸೇರಿದಂತೆ ಒಟ್ಟು 409 ಮಂದಿ 25 ವರ್ಷದೊಳಗಿನವರು ಸೇರಿದ್ದಾರೆ. ಜಿಲ್ಲೆಯಲ್ಲಿ ಕಳೆದ ಜನವರಿ ಒಂದರಿಂದ ಇಂದಿನವರೆಗೆ ಒಟ್ಟು 5517 ಮಂದಿ 0-25ವರ್ಷ ವಯೋವರ್ಗಕ್ಕೆ ಸೇರಿದವರು ಎಂದು ಮಾಹಿತಿ ತಿಳಿಸಿದೆ.
ಇಂದು ಪಾಸಿಟಿವ್ ಬಂದವರಲ್ಲಿ 0-5ವರ್ಷದೊಳಗಿನ ಒಟ್ಟು ಆರು ಮಂದಿ, 6ರಿಂದ 10ವರ್ಷದೊಳಗಿನ 112, 11ರಿಂದ 15ವರ್ಷದೊಳಗಿನ 133, 16ರಿಂದ20ವರ್ಷದೊಳಗಿನ 100 ಹಾಗೂ 20ರಿಂದ 25ವರ್ಷದೊಳಗಿನ 58 ಮಂದಿ ಕೊರೋನಕ್ಕೆ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ.