ಮಂಗಳೂರು; ದಾಖಲೆಗಳಿಲ್ಲದೆ 1.48 ಕೋ.ರೂ. ಸಾಗಾಟ ಮಾಡುತ್ತಿದ್ದ ಆರೋಪಿ ಸೆರೆ

ಮಂಗಳೂರು, ಜ. 24: ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ 1.48 ಕೋ. ರೂ. ನಗದು ಮತ್ತು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಸಾಗಿಸುತ್ತಿದ್ದ ಪ್ರಯಾಣಿಕನನ್ನು ಮಂಗಳೂರು ರೈಲ್ವೆ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಜಸ್ಥಾನ ಮೂಲದ ಮಹೇಂದ್ರ ಸಿಂಗ್ (35) ಎಂದು ಗುರುತಿಸಲಾಗಿದೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಬಿಗಿ ತಪಾಸಣೆ ನಡೆಯುತ್ತಿದ್ದು, ರವಿವಾರ ರೈಲಿನ ಮೂಲಕ ಪನ್ವೇಲ್‌ನಿಂದ ಕೇರಳಕ್ಕೆ ತೆರಳುತ್ತಿದ್ದ ವೇಳೆ ಈತನನ್ನು ಬಂಧಿಸಲಾಗಿದೆ.
ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಮಹೇಂದ್ರ ಸಿಂಗ್‌ನನ್ನು ತಪಾಸಣೆಗೊಳಪಡಿಸಿದಾಗ ದಾಖಲೆಗಳಿಲ್ಲದೆ 1.48 ಕೋ.ರೂ. ಮತ್ತು ಚಿನ್ನಾಭರಣ ಸಾಗಾಟ ಮಾಡುತ್ತಿದ್ದುದು ಕಂಡು ಬಂತು. ತಕ್ಷಣ ಸೊತ್ತು ಸಮೇತ ಆರೋಪಿಯನ್ನು ಬಂಧಿಸಲಾಯಿತು.
ಆರೋಪಿಯು ಪನ್ವೇಲ್ ರೈಲು ನಿಲ್ದಾಣದಿಂದ ಮಂಗಳೂರಿಗೆ ಆಗಮಿಸಿದ್ದ ಎನ್ನಲಾಗಿದೆ. ಈತನ ಬಳಿಯಿದ್ದ ಕಪತ್ಪು ಬಣ್ಣದ ಬ್ಯಾಗ್ ತಪಾಸಣೆ ನಡೆಸಿದಾಗ ಅದರಲ್ಲಿ 1,48,58,000 ರೂ. ನಗದು ಮತ್ತು 40 ಲಕ್ಷ ರೂ. ಮೌಲ್ಯದ 800 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ.