ವಿದೇಶಿ ಪ್ರಜೆಯೆಂದು ಘೋಷಿಸಿದ ಮಹಿಳೆಗೆ ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ನ್ಯಾಯ

ಸಾಂದರ್ಭಿಕ ಚಿತ್ರ
ಗುವಾಹಟಿ: 2017 ರಲ್ಲಿ ಅಸ್ಸಾಮಿನ ಸಿಲ್ಚಾರ್ ಜಿಲ್ಲೆಯ ಮಹಿಳೆಯೋರ್ವರನ್ನು ವಿದೇಶಿಯೆಂದು ಘೋಷಿಸಿದ್ದ 'ವಿದೇಶಿಯರ ನ್ಯಾಯಮಂಡಳಿ' (foreigners’ tribunal) ಗುವಾಹಟಿ ಹೈಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ ಆಕೆ ಭಾರತದ ಪ್ರಜೆ ಎಂದು ಆದೇಶ ಹೊರಡಿಸಿದೆ ಎಂದು indianexpress.com ವರದಿ ಮಾಡಿದೆ.
ಸೆಪ್ಟೆಂಬರ್ 19, 2017 ರಂದು, ಫಾರಿನರ್ಸ್ ಟ್ರಿಬ್ಯೂನಲ್ 6, ಕ್ಯಾಚಾರ್ ಜಿಲ್ಲೆಯ ಸೋನೈನ ಮೋಹನ್ಖಾಲ್ ಗ್ರಾಮದ 23 ವರ್ಷದ ಮಹಿಳೆ ಸೆಫಾಲಿ ರಾಣಿ ದಾಸ್ ಅವರನ್ನು ವಿದೇಶಿ ಎಂದು ಘೋಷಿಸಿತ್ತು.
ಇದನ್ನು ಪ್ರಶ್ನಿಸಿ ರಾಣಿ ದಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಕೆಳ ಹಂತದ ನ್ಯಾಯಾಲಯದ ಹಿಂದಿನ ಆದೇಶವನ್ನು ರದ್ದು ಪಡಿಸಿ ರಾಣಿ ಅವರಿಗೆ ಸಿಲ್ಚಾರ್ ನ್ಯಾಯಮಂಡಳಿ ಎದುರು ತನ್ನ ಪೌರತ್ವವನ್ನು ಸಾಬೀತುಪಡಿಸುವ ಮತ್ತೊಂದು ಅವಕಾಶ ಹೈಕೋರ್ಟ್ ನೀಡಿತ್ತು.
ಕಳೆದ ಮಂಗಳವಾರ ಟ್ರಿಬ್ಯೂನಲ್ ಮತ್ತೆ ಪ್ರಕರಣವನ್ನು ಆಲಿಸಿದ್ದು, ರಾಣಿ ದಾಸ್ ಸಲ್ಲಿಸಿದ ಆಧಾರಗಳು ಸಮರ್ಪಕ, ವಿಶ್ವಾಸಾರ್ಹ ಮತ್ತು ಸ್ವೀಕಾರಾರ್ಹ ಪುರಾವೆ ಎಂದು ಪರಿಗಣಿಸಿ ಭಾರತದ ಪ್ರಜೆ ಎಂದು ಘೋಷಿಸಿತು.
ತನ್ನ ಅಜ್ಜ ಭಾರತದ ಮಣ್ಣಿನಲ್ಲಿ 25.03.1971 ಕ್ಕೂ ಮೊದಲೇ ಇದ್ದುದರ ಕುರಿತ ಸಮರ್ಪಕ ದಾಖಲೆಯನ್ನು ಆಕೆ ಒದಗಿಸಿದ್ದಾರೆ. ಹಾಗೂ ಅಜ್ಜನಿಗೂ ತನಗೂ ಇರುವ ಸಂಬಂದವನ್ನು ಸಾಬೀತುಪಡಿಸುವ ದಾಖಲೆಯನ್ನೂ ಒದಗಿಸಲು ಆಕೆ ಯಶಸ್ವಿಯಾಗಿದ್ದಾರೆ ಎಂದು ಟ್ರಿಬ್ಯೂನಲ್ ಸದಸ್ಯ ಧರ್ಮಾನಂದ ದೇಬ್ ಉಲ್ಲೇಖಿಸಿರುವುದಾಗಿ Indian Express ವರದಿ ಮಾಡಿದೆ.
ಈ ಹಿಂದೆ ಹಲವು ಬಾರಿ ವಿಚಾರಣೆಗೆ ಹಾಜರಾಗಲು ವಿಫಲರಾಗಿದ್ದ ಕಾರಣ ರಾಣಿ ದಾಸ್ ಅವರನ್ನು ವಿದೇಶಿ ಪ್ರಜೆ ಎಂದು ಘೋಷಿಸಲಾಗಿತ್ತು. ಕಾನೂನು ನಿಬಂಧನೆಗಳ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ ಹಾಗೂ ಈ ಕುರಿತು ತಮ್ಮ ವಕೀಲರಿಂದ ಸರಿಯಾದ ಕಾನೂನು ಸಲಹೆ ಪಡೆದಿಲ್ಲದ ಕಾರಣ ವಿಚಾರಣೆಯ ದಿನಾಂಕಗಳನ್ನು ತಪ್ಪಿಸಿಕೊಂಡಿದ್ದೆಳೆಂದು ಅವರು ಹೈಕೋರ್ಟಿಗೆ ತಿಳಿಸಿದ್ದರು.







