ಮಂಗಳೂರು; ಟಿಪ್ಪರ್-ರಿಕ್ಷಾ ಢಿಕ್ಕಿ: ಗಾಯಗೊಂಡಿದ್ದ ಬಾಲಕಿ ಮೃತ್ಯು

ಮಂಗಳೂರು, ಜ.25: ನಗರ ಹೊರವಲಯದ ಅಡ್ಡೂರು ಸಮೀಪದ ಕಾಜಿಲ ಎಂಬಲ್ಲಿ ಸೋಮವಾರ ಟಿಪ್ಪರ್ ಮತ್ತು ರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಮೃತ ಬಾಲಕಿಯನ್ನು ಕರಿಯಂಗಳ ಗ್ರಾಮದ ಪಳ್ಳಿಪಾಡಿಯ ಆಸ್ನಾ (16) ಎಂದು ಗುರುತಿಸಲಾಗಿದೆ.
ಆಸ್ನಾ ತನ್ನ ತಾಯಿ ರೆಹನಾರೊಂದಿಗೆ ರಿಕ್ಷಾದಲ್ಲಿ ಗುರುಪುರ ಕೈಕಂಬದತ್ತ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೈಕಂಬದತ್ತ ಹೋಗುತ್ತಿದ್ದಾಗ ಪೊಳಲಿ ದ್ವಾರದಿಂದ ಅಡ್ಡೂರಿನತ್ತ ಅತಿ ವೇಗ ಮತ್ತು ಅಜಾಗರೂಕತೆಯಿಂದ ರಾಂಗ್ ಸೈಡ್‌ನಲ್ಲಿ ಚಲಿಸುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಇದರಿಂದ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ರಸ್ತೆಯ ಪಕ್ಕಕ್ಕೆ ಎಸೆಯಲ್ಪಟ್ಟಿತ್ತು.
ತಕ್ಷಣ ಸ್ಥಳೀಯರು ಗಂಭೀರ ಗಾಯಗೊಂಡಿದ್ದ ತಾಯಿ ಮತ್ತು ಮಗಳು ಹಾಗೂ ರಿಕ್ಷಾ ಚಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕರಿಯಾಗದೆ ಮಂಗಳವಾರ ಆಸ್ನಾ ಮೃತಪಟ್ಟಿದ್ದಾರೆ.
ಅಸ್ನಾ ಮಿಜಾರು ಸಮೀಪದ ತೋಡಾರಿನ ಆದರ್ಶ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದಳು. ರ್ಘಟನೆಯ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





