ಉಡುಪಿ ಸ್ಕಾರ್ಫ್ ವಿವಾದ: ಯಥಾಸ್ಥಿತಿ ಮುಂದುವರಿಸಲು ಶಿಕ್ಷಣ ಇಲಾಖೆ ನಿರ್ದೇಶ
ಫೈಲ್ ಫೋಟೊ
ಉಡುಪಿ, ಜ. 25: ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಸ್ಕಾರ್ಫ್ ವಿವಾದದ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿ, ಸಮಿತಿ ಸಲ್ಲಿಸುವ ಶಿಫಾರಸ್ಸುಗಳನ್ನು ಪರಿಶೀಲಿಸಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಅಲ್ಲಿಯವರೆಗೆ ಕಾಲೇಜಿನ ಸಮವಸ್ತ್ರ/ವಸ್ತ್ರ ಸಂಹಿತೆಯಲ್ಲಿ ಯಥಾಸ್ಥಿತಿಯನ್ನು ಮುಂದುವರೆಸಲು ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆ(ಪದವಿ ಪೂರ್ವ ಶಿಕ್ಷಣ) ಸರಕಾರದ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್., ಇಲಾಖಾ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಅವರ ಪತ್ರವನ್ನು ಉಲ್ಲೇಖಿಸಿ ಈ ನಿರ್ದೇಶನ ನೀಡಲಾಗಿದೆ. ವಿವಿಧ ರಾಜ್ಯಗಳಲ್ಲಿ ಪದವಿ ಪೂರ್ವ ತರಗತಿಗಳ ವಿದ್ಯಾರ್ಥಿಗಳಿಗೆ ಜಾರಿಯಲ್ಲಿರುವ ಸಮವಸ್ತ್ರ ನೀತಿ ಸಂಹಿತೆ ಯನ್ನು ಪರಿಶೀಲಿಸಲು ಹಾಗೂ ಈ ಕುರಿತು ದೇಶದ ಸರ್ವೋಚ್ಛ ನ್ಯಾಯಾಲಯ, ವಿವಿಧ ರಾಜ್ಯಗಳ ಉಚ್ಛ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಅವಲೋಕಿಸಬೇಕಾಗಿದೆ.
ರಾಜ್ಯದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ಅಥವಾ ವಸ್ತ್ರ ಸಂಹಿತೆಯನ್ನು ನಿಗದಿಗೊಳಿಸುವ ಕುರಿತು ಚಿಂತನ ಮಂಥನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸುವುದು ಅಗತ್ಯವಾಗಿರುತ್ತದೆ. ಈ ಪ್ರಕ್ರಿಯೆ ನಡೆಯುವವರೆಗೆ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ತಮ್ಮ ಸಂಸ್ಥೆಯ ಹಂತದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಿಗದಿಗೊಳಿಸಿರುವ ಸಮವಸ್ತ್ರ/ವಸ್ತ್ರ ಸಂಹಿತೆಯ ವಿಷಯದಲ್ಲಿ ಯಥಾಸ್ಥಿತಿಯನ್ನು ಮುಂದುವರೆಸಲು ಕ್ರಮವಹಿಸಬೇಕು ಎಂದು ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನಿಗಧಿಗೊಳಿಸಿ ಕಡ್ಡಾಯ ಗೊಳಿಸಿರುವುದಿಲ್ಲ. ಆದರೆ ತಮ್ಮ ಆಯ್ಕೆಯ ವಸ್ತ್ರವನ್ನು ಧರಿಸಿ ಬರಲು ಅನುಮತಿ ನೀಡುವಂತೆ ಒತ್ತಾಯಿಸುತ್ತಿರುವ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶ ಪಡೆಯುವ ವೇಳೆ ಕಾಲೇಜು ನಿಗದಿ ಮಾಡಿದ್ದ ಸಮವಸ್ತ್ರ/ವಸ್ತ್ರ ಸಂಹಿತೆಯ ಕುರಿತು ಮಾಹಿತಿ ಇದ್ದು, ಅದನ್ನು ಒಪ್ಪಿಯೇ ಸ್ವಇಚ್ಛೆಯಿಂದ ಕಾಲೇಜಿಗೆ ದಾಖಲಾತಿಯನ್ನು ಪಡೆದಿದ್ದಾರೆ. ಆದರೆ ಇಷ್ಟು ದಿನಗಳು ಇಲ್ಲದ ಗೊಂದಲವನ್ನು ಈಗ ಹೊಸದಾಗಿ ಸೃಷ್ಠಿಸುತ್ತಿರುವುದು ಶೈಕ್ಷಣಿಕ ಹಿತದೃಷ್ಠಿಯಿಂದ ಒಳಿತಲ್ಲ ಎಂದು ಪದ್ಮಿನಿ ಎಸ್.ಎನ್. ತಮ್ಮ ನಿರ್ದೇಶನದಲ್ಲಿ ತಿಳಿಸಿದ್ದಾರೆ.
ಸಮವಸ್ತ್ರದಲ್ಲಿ ತರಗತಿಗೆ ಹಾಜರಾಗುವಂತೆ ಶಾಸಕರ ಮನವಿ
ಸ್ಕಾರ್ಫ್ ವಿಚಾರದ ಕುರಿತು ಸರಕಾರ ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ಇಂದು ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಹಾಗೂ ಪೋಷಕರನ್ನೊಳ ಗೊಂಡ ಶಿಕ್ಷಣ ಸೇವಾ ಸಮಿತಿಯ ಜಂಟಿ ಸಭೆ ನಡೆಯಿತು.
ಈ ವಿಷಯದ ಬಗ್ಗೆ ಚರ್ಚೆ ನಡೆದು ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ತರಗತಿಗೆ ಹಾಜರಾಗಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಇದಕ್ಕೆ ಮಕ್ಕಳ ಪೋಷಕರನ್ನು ಒಳಗೊಂಡ ಸಮಿತಿಯ ಸದಸ್ಯರು ಬೆಂಬಲವನ್ನು ಸೂಚಿಸಿದರು. ಪ್ರಸ್ತುತ ಕೇವಲ ಆರು ಮಕ್ಕಳಿಂದಾಗಿ ಕಾಲೇಜಿನಲ್ಲಿರುವ 1000 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕು ಉಂಟಾಗುತ್ತಿದೆ. ಆದುದರಿಂದ ಸರಕಾರದ ಆದೇಶದಂತೆ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ತರಗತಿಗೆ ಹಾಜಾರಾಗಬೇಕು ಮತ್ತು ಈ ಬಗ್ಗೆ ಮಕ್ಕಳ ಪೋಷಕರಿಗೆ ಮನವರಿಕೆ ಮಾಡಿ ಕೊಡುವುದು ಸೂಕ್ತ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.