ಎಸೆಸೆಲ್ಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು, ಜ.25: 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮುಖ್ಯ ಅಂತಿಮ ಪರೀಕ್ಷೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಯಲಿದ್ದು, ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಕಟಿಸಿದೆ.
ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಸಮಯ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ನಡೆಯಲಿದೆ. ಪ್ರತಿ ವಿಷಯಕ್ಕೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ.
ಮಾ.28ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ತೆಮಿಳು, ಮರಾಠಿ, ಉರ್ದು, ಇಂಗ್ಲಿಷ್, ಇಂಗ್ಲಿಷ್(ಎನ್‍ಸಿಇಆರ್‍ಟಿ), ಸಂಸ್ಕøತ ಭಾಷೆಗಳಿಗೆ ಪರೀಕ್ಷೆ ನಡೆಯಲಿದೆ. ಮಾ.30ರಂದು ದ್ವಿತೀಯ ಬಾಷೆ ಇಂಗ್ಲಿಷ್ ಮತ್ತು ದ್ವಿತೀಯ ಬಾಷೆ ಕನ್ನಡ ವಿಷಯಗಳಿಗೆ ಪರೀಕ್ಷೆ ನಡೆಯಲಿವೆ.
ಏ.1ರಂದು ಕೋರ್ ಸಬ್ಜೆಕ್ಟ್‍ಗಳಾದ ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ಹಾಗೂ ಅರ್ಥಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಡೆಸಲಾಗುವುದು.
ಏ.4ರಂದು ಗಣಿತ ಮತ್ತು ಸಮಾಜಶಾಸ್ತ್ರ ವಿಷಯಗಳಿಗೆ, ಏ.6ರಂದು ಸಮಾಜ ವಿಜ್ಞಾನ ವಿಷಯಕ್ಕೆ ಪರೀಕ್ಷೆಯನ್ನು ನಡೆಸಲಾಗುವುದು. ಏ.8ರಂದು ತೃತೀಯ ಭಾಷೆ ಹಿಂದಿ,ನ ಹಿಂದಿ(ಎನ್‍ಸಿಇಆರ್‍ಟಿ), ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ವಿಷಯಗಳಿಗೆ ಹಾಗೂ ಎನ್‍ಎಸ್‍ಕ್ಯೂಎಫ್ ಪರೀಕ್ಷಾ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೋಬೈಲ್, ಹೆಲ್ತ್ ಕೇರ್ ಮತ್ತು ಬ್ಯೂಟಿ ಅಂಡ್ ವೆಲ್‍ನೆಸ್ ವಿಷಯಗಳಿಗೆ ಪರೀಕ್ಷೆಯನ್ನು ನಡೆಸಲಾಗುವುದು.
ಏ.11ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ ವಿಷಯಗಳಿಗೆ ಪರೀಕ್ಷೆ ನಡೆಸಲಾಗುವುದು.
ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ 3 ಗಂಟೆಗಳು ಪರೀಕ್ಷೆಯನ್ನು ಬರೆಯಲು ಮತ್ತು 15 ನಿಮಿಷ ಓದಲು, ದ್ವಿತೀಯ ಮತ್ತು ತೃತೀಯ ಭಾಷಾ ಪರೀಕ್ಷೆಗಳಿಗೆ 2 ಗಂಟೆ 45 ನಿಮಿಷ ಬರೆಯಲು ಮತ್ತು 15 ನಿಮಿಷ ಓದಲು ಕಾಲಾವಕಾಶ ನೀಡಲಾಗಿದೆ. ಪ್ರಥಮ ಭಾಷೆಗೆ 125 ಅಂಕಗಳಿಗೆ, ಉಳಿದ ವಿಷಯಗಳಿಗೆ 100 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಪರೀಕ್ಷಾ ಮಂಡಳಿ ಪ್ರಕಟಣೆ ತಿಳಿಸಿದೆ.









