ಅಂಗಾಂಗ ದಾನದ ಮೂಲಕ ಆರು ಮಂದಿಗೆ ಪುನರ್ಜನ್ಮ ನೀಡಿದ ಮಹಿಳೆ
ಸಾವಿನಲ್ಲೂ ಸಾರ್ಥಕ್ಯಕಂಡ ದಾವಣಗೆರೆಯ 57ರ ಹರೆಯದ ಇಂದ್ರಮ್ಮ

ಉಡುಪಿ, ಜ.25: ಕಳೆದ ಶನಿವಾರ ದಾವಣಗೆರೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾದ ಇಂದ್ರಮ್ಮ ಬಿ.ಎಂ.(57), ವಿಶೇಷ ಚಿಕಿತ್ಸೆಯ ಹೊರತಾಗಿಯೂ ಬದುಕುಳಿಯಲು ಸಾಧ್ಯವಾಗದಿದ್ದರೂ, ಆಕೆಯ ಅಂಗಾಂಗ ಆರು ಮಂದಿಗೆ ಪುನರ್ಜನ್ಮ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕ್ಯವನ್ನು ಕಂಡುಕೊಂಡರು.
ದಾವಣಗೆರೆ ಬಳಿ ಗುಡಾಲು ಗ್ರಾಮದ ಗುಮ್ಮನೂರು ರಸ್ತೆಯಲ್ಲಿ ಜ.22ರ ಸಂಜೆ 4 ಗಂಟೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಂಜುಂಡಪ್ಪ ಎಚ್.ಎನ್. ಇವರ ಪತ್ನಿ ಇಂದ್ರಮ್ಮ ತೀವ್ರವಾಗಿ ಗಾಯಗೊಂಡಿದ್ದರು. ಇದರಿಂದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜ.23ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಅವಿರತ ಪ್ರಯತ್ನಗಳ ಹೊರತಾಗಿಯೂ ಇಂದ್ರಮ್ಮ ಚೇತರಿಸಿಕೊಳ್ಳಲು ವಿಫಲರಾಗಿದ್ದರು. ಆಕೆಯ ಮೆದುಳು ನಿಷ್ಕೃಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದರು.
‘ನಮ್ಮ ವೈದ್ಯರು ಇಂದ್ರಮ್ಮ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಇಂದ್ರಮ್ಮ ಬಿ.ಎಂ. ಅವರನ್ನು 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ವೈದ್ಯರು ಘೋಷಿಸಿದರು.
ಮೊದಲನೆಯದು ಜ.24ರ ಬೆಳಗ್ಗೆ 10:29ಕ್ಕೆ ಮತ್ತು ಎರಡನೆಯದು ಜ.24ರ ಸಂಜೆ 4:53ಕ್ಕೆ. ಈ ಹಂತದಲ್ಲಿ ಇಂದ್ರಮ್ಮ ಅವರ ಪತಿ ನಂಜುಂಡಪ್ಪ ಎಚ್.ಎನ್. ಅವರು ಪತ್ನಿಯ ಅಂಗಗಳನ್ನು ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.
1994ರ ಮಾನವ ಹಕ್ಕುಗಳ ಕಾಯಿದೆಯ 1994 ಪ್ರೋಟೋಕಾಲ್‌ಗಳು ಹಾಗೂ ಕಾರ್ಯವಿಧಾನಗಳ ಪ್ರಕಾರ, ಇಂದ್ರಮ್ಮ ಅವರ ಹೃದಯ/ಹೃದಯ ಕವಾಟಗಳು, ಯಕೃತ್ತು, ಎರಡು ಮೂತ್ರಪಿಂಡಗಳು ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳನ್ನು ತೆಗೆಯಲು ನಿರ್ಧರಿಸಲಾಯಿತು. ಇದರಿಂದ ಒಟ್ಟು ಆರು ಮಂದಿಯ ಜೀವ ಉಳಿಸಲು ಸಹಾಯವಾಗಿದೆ ಎಂದು ಡಾ.ಶೆಟ್ಟಿ ತಿಳಿಸಿದರು.
ಜೀವನ ಸಾರ್ಥಕತೆ ಪ್ರೋಟೋಕಾಲ್‌ಗಳು ಮತ್ತು ನಿರ್ಧಾರಗಳ ಪ್ರಕಾರ, ನೋಂದಾಯಿತ ರೋಗಿಗಳಿಗೆ ಎರಡು ಕಾರ್ನಿಯಾಗಳು ಮತ್ತು ಒಂದು ಮೂತ್ರಪಿಂಡವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ರೋಗಿಗಳಿಗೆ ಬಳಸಲಾ ಯಿತು. ಒಂದು ಮೂತ್ರಪಿಂಡವನ್ನು ಮಂಗಳೂರಿನ ಯೆನೆಪೊಯ ಆಸ್ಪತ್ರೆಗೆ, ಹೃದಯ/ಹೃದಯ ಕವಾಟವನ್ನು ಚೆನ್ನೈನ ಎಂ.ಜಿ.ಎಂ ಆಸ್ಪತ್ರೆಯ ರೋಗಿಗಳಿಗೆ ಕಳುಹಿಸಿಕೊಡಲಾಯಿತು ಎಂದು ಅವರು ವಿವರಿಸಿದರು.
ಪತ್ನಿಯನ್ನು ಕಳೆದುಕೊಂಡ ದು:ಖದ ನಡುವೆಯೂ ಇಂದ್ರಮ್ಮ ಅವರ ಪ್ರಮುಖ ಅಂಗಗಳ ದಾನಕ್ಕೆ ಮುಂದಾದ ಪತಿ ನಂಜುಂಡಪ್ಪ ಈ ಬಗ್ಗೆ ಮಾತನಾಡಿ, ‘ಅಂಗದಾನ ಒಂದು ಪುಣ್ಯದ ಕೆಲಸ. ನನ್ನ ಪತ್ನಿ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ’ ಎಂದರು.
‘ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸವಾಗಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಜನರು ಈ ರೀತಿಯ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು. ಅಂಗದಾನ ಮಾಡಲು ನಿರ್ಧರಿಸುವ ಮೂಲಕ ಇಂದ್ರಮ್ಮ ಕುಟುಂಬ ಆರು ಮಂದಿಗೆ ಪುನರ್ಜನ್ಮ ನೀಡಿದೆ.’ ಎಂದು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದರು.
ಉಡುಪಿ ಪೊಲೀಸರ ಇಲಾಖೆಯ ಸಹಕಯೋಗದೊಂದಿಗೆ ದಾನ ಮಾಡಿದ ಅಂಗಗಳನ್ನು ಹಸಿರು ಪಥದಲ್ಲಿ (ಗ್ರೀನ್ ಕಾರಿಡಾರ್) ಮಣಿಪಾಲದಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು, ಅಲ್ಲಿಂದ ಚೆನ್ನೈಗೆ ಕೊಂಡೊಯ್ಯಲಾಗಿದೆ.