ಉದ್ದಿಮೆ ಪರವಾನಿಗೆ, ನವೀಕರಣವನ್ನು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಕೆಗೆ ಅವಕಾಶ : ಮೇಯರ್ ಪ್ರೇಮಾನಂದ ಶೆಟ್ಟಿ

ಮಂಗಳೂರು: ಮಹಾನಗರಪಾಲಿಕೆಯು ನಗರದಾದ್ಯಂತ ವ್ಯಾಪಾರ ಪರವಾನಿಗೆಯ ನಿರ್ವಹಣೆಗಾಗಿ ಸಾಫ್ಟ್‌ವೇರ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ ನಂತರ ಸಾಫ್ಟ್‌ವೇರ್ ವ್ಯವಸ್ಥೆಯು ಹೊಸ ವ್ಯಾಪಾರ ಪರವಾನಿಗೆಗಾಗಿ ಅರ್ಜಿ ಸಲ್ಲಿಸುವುದು, ವ್ಯಾಪಾರ ಪರವಾನಿಗೆಯನ್ನು ನವೀಕರಿಸುವುದು, ಪರವಾನಿಗೆಯನ್ನು ರದ್ದುಪಡಿಸುವುದು, ಪರವಾನಿಗೆಯನ್ನು ಮುದ್ರಿಸುವುದು, ವ್ಯಾಪಾರ ಅನುಮೋದಿಸುವುದು ಮತ್ತು ವೆಬ್ ಪೋರ್ಟಲ್ ಮೂಲಕ ಪರವಾನಿಗೆಯ ಸ್ಥಿತಿಯನ್ನು ಪತ್ತೆ ಹಚ್ಚುವ ಸೌಲಭ್ಯ ಸಾರ್ವಜನಿಕರಿಗೆ ದೊರೆಯಲಿದೆ.
ಈ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ (KEONICS) ಸಂಸ್ಥೆಯ ವತಿಯಿಂದ ಉದ್ದಿಮೆ ಪರವಾನಗಿಯ/ಸಾಫ್ಟ್‌ವೇರ್ ಸಿಸ್ಟಮ್ ಅಪ್ಲಿಕೇಷನ್ ಸಾಫ್ಟ್ ವೇರ್ ಸಿದ್ದಪಡಿಸಿ 2021-22 ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗಿರುತ್ತದೆ. ಅದರಂತೆ ಕಳೆದ ಸಾಲಿನ ಉದ್ದಿಮೆದಾರರಿಂದ ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿರುತ್ತದೆ. ಇದರಿಂದ ಪಾಲಿಕೆಗೆ ಉತ್ತಮ ಆದಾಯ ಮತ್ತು ಉದ್ದಿಮೆ ಪರವಾನಗಿಯ ಅಂಕಿಅಂಶಗಳ ಬಗ್ಗೆ ಕೂಡ ಸ್ಪಷ್ಟ ಮಾಹಿತಿಯನ್ನು ಪಡೆಯಲು ಸಾಧ್ಯ ವಾಗಿದೆ ಎಂದು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರಿಗೆ 2022-23ನೇ ಸಾಲಿನ ಉದ್ದಿಮೆ ಪರವಾನಿಗೆಯನ್ನು ನವೀಕರಣ ಮಾಡಲು ಇನ್ನಷ್ಟು ಸರಳಗೊಳಿಸಲು ಹಾಗು ಶೀಘ್ರದಲ್ಲಿ ಪರವಾನಿಗೆಯನ್ನು ಪಡೆಯಲು ಅನುಕೂಲವಾಗುವಂತೆ ಉದ್ದಿಮೆ ಪರವಾನಗಿಯ ಸಾಫ್ಟ್‌ವೇರ್ ಸಿಸ್ಟಮ್ ಅಪ್ಲಿಕೇಷನ್‌ನ್ನು ಅಭಿವೃದ್ದಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ತರಲು ಪಾಲಕೆಯು ಉದ್ದೇಶಿಸಿದೆ.
ಪಾಲಿಕೆ ವ್ಯಾಪ್ತಿಗೆ ಬರುವ ಪರವಾನಿಗೆ 2022-23 ನೇ ಸಾಲಿನ ನವೀಕರಣದ ಬಗ್ಗೆ ಸದರಿ ಸಾಲಿನಲ್ಲಿ online ತಂತ್ರಾಂಶದಲ್ಲಿ ಕೆಳಕಂಡ ಪ್ರಕ್ರಿಯೆಗಳು ಇರುತ್ತದೆ ಎಂದು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.
ಮನಪಾ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ದ ಬಗ್ಗೆ ಮಾಹಿತಿ ಸಂಗ್ರಹ ದೊಂದಿಗೆ ಇನ್ನಷ್ಟು ಸುಧಾರಣೆಯಾಗಲಿದೆ. ಕಸವಿಲೇವಾರಿ ನಿರ್ವಹಣೆ ಗೆ ಹೊಸ ಡಿಪಿಆರ್ ತಯಾರಿಸಿ ಸರಕಾರದ ಅನುಮೋದನೆ ಗೆ ಸಲ್ಲಿಸಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮನಪಾ ಉಪ ಮೇಯರ್ ಸುಮಂಗಲರಾವ್, ಆಯುಕ್ತ ಅಕ್ಷಯ್ ಶ್ರೀಧರ್, ಮನಪಾ ಸ್ಥಾಯಿ ಸಮಿತಿ ಅಧಕ್ಷರಾದ ಶೋಭಾ ರಾಜೇಶ್, ಸುಧೀರ್ ಶೆಟ್ಟಿ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.