ಸಿದ್ದಲಿಂಗಯ್ಯ, ಅಬ್ದುಲ್ ಖಾದರ್, ಅಮೈ ಮಹಾಲಿಂಗ ನಾಯ್ಕ್ ಸಹಿತ ರಾಜ್ಯದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಗೌರವ

ಅಮೈ ಮಹಾಲಿಂಗ ನಾಯ್ಕ್ ಪ್ರೊ.ಸಿದ್ದಲಿಂಗಯ್ಯ ಅಬ್ದುಲ್ಖಾದರ್ ನಡಕಟ್ಟಿನ್
ಬೆಂಗಳೂರು, ಜ.25: ಗಣರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸರಕಾರ ಮಂಗಳವಾರ ಪ್ರಕಟಿಸಿರುವ ಪದ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ ಪ್ರೊ.ಸಿದ್ದಲಿಂಗಯ್ಯ ಸಹಿತ ರಾಜ್ಯದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಸಾಹಿತ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಪ್ರೊ.ಸಿದ್ದಲಿಂಗಯ್ಯ (ಮರಣೋತ್ತರ) ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಸುಬ್ಬಣ್ಣ ಅಯ್ಯಪ್ಪನ್, ಕಲಾ ವಿಭಾಗದಲ್ಲಿ ಎಚ್.ಆರ್.ಕೇಶವಮೂರ್ತಿ, ಕೃಷಿ ಸಂಶೋಧನೆ ವಿಭಾಗದಲ್ಲಿ ಅಬ್ದುಲ್ ಖಾದರ್ ನಡಕಟ್ಟಿನ್ ಹಾಗೂ ಕೃಷಿ ಕ್ಷೇತ್ರದ ವಿಭಾಗದಲ್ಲಿ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಸಾಧಕರ ಪರಿಚಯ
ಸಿದ್ದಲಿಂಗಯ್ಯ: ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಡಾ.ಸಿದ್ದಲಿಂಗಯ್ಯನವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೋಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಬೆಂಗಳೂರಿನ ಶ್ರೀರಾಮಪುರದ ಸ್ಲಂನಲ್ಲಿ ಬಡತನದಲ್ಲಿ ಬೆಳೆದವರು. ಮಲ್ಲೇಶ್ವರಂನ ಸರ್ಕಾರಿ ಶಾಲೆ ಇವರ ವಿದ್ಯಾಕೇಂದ್ರವಾಗಿತ್ತು.
ಚಿಕ್ಕಂದಿನಲ್ಲಿಯೇ ಕವಿತೆ ಬರೆಯುವ ಅಭ್ಯಾಸ ಬೆಳೆಸಿಕೊಂಡಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. ಕಾಲೇಜು ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿದ್ದರು.
ಅಪರೂಪದ ಸಾಹಿತಿಯಾದ ಸಿದ್ದಲಿಂಗಯ್ಯನವರು ರಚಿಸಿದ `ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’ ಬರೀ ಕವಿತೆಯಾಗಿ ಅಲ್ಲ, ದಲಿತ ಸಮುದಾಯದ ಸ್ವಾಭಿಮಾನದ ಕಿಡಿಯಾಗಿ, ಹೋರಾಟದ ಕಿಚ್ಚಾಗಿ, ಚಲನಚಿತ್ರ ಗೀತೆಯಾಗಿ ಜನಮಾನಸದಲ್ಲಿ ನೆಲೆಯಾಯಿತು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾದ ಸಿದ್ದಲಿಂಗಯ್ಯನವರು, ದಲಿತ ಚಳವಳಿಗೆ ಹೊಸ ದಿಕ್ಕು ದೆಸೆಗಳನ್ನು ನೀಡಿದವರು. ತಮ್ಮ ಹೋರಾಟದ ಗೀತೆಗಳು ಮತ್ತು ಭಾಷಣಗಳಿಂದ ಚೈತನ್ಯ ತುಂಬಿದವರು. ತಮ್ಮ ನೋವನ್ನು ತಮಾμÉಯ ಮೂಲಕ ಸಮಾಜಕ್ಕೆ ದಾಟಿಸಿದವರು. ಸದಾಕಾಲ ಸಾಮಾಜಿಕ ಸಮಾನತೆಯ ಹೋರಾಟದಲ್ಲಿ ತೊಡಗಿಕೊಂಡವರು.
'ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ದಲಿಂಗಯ್ಯನವರು ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕ ಸದಾಕಾಲ ಸ್ಮರಿಸುವಂತಹ ಕೊಡುಗೆಯನ್ನು ನೀಡಿದವರು. ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದವರು. ಜೂನ್ 11, 2021ರಂದು ಕೊರೋನ ವೈರಸ್ ಸೋಂಕಿಗೆ ತುತ್ತಾಗಿ, ತಮ್ಮ 67 ವಯಸ್ಸಿನಲ್ಲಿ ನಿಧನರಾದರು.
ಅಬ್ದುಲ್ ಖಾದರ್: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಕಪ್ಪು ಮಣ್ಣಿನ ನೆಲ. ಸುಡು ಬಿಸಿಲಿನ ಊರು. ಇಂತಹ ಊರಿನಲ್ಲಿ ‘ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರ’ದಲ್ಲಿ ಹೊಸ ಬಗೆಯ ಕೃಷಿ ಯಂತ್ರೋಪಕರಣಗಳ ಸಂಶೋಧನೆಯಲ್ಲಿ ತೊಡಗಿಕೊಂಡವರು ಅಬ್ದುಲ್ ಖಾದರ್.
ಬೇರೆ ರಾಜ್ಯಗಳಿಂದ, ರಾಜ್ಯದ ನಾನಾ ಭಾಗಗಳಿಂದ ಖಾದರ್ ಅವರ ‘ನಡಕಟ್ಟಿನ ಕೃಷಿ ಯಂತ್ರೋಪಕರಣ’ಕ್ಕಾಗಿ ಹುಡುಕಿಕೊಂಡು ಬರುವುದುಂಟು. ಇವರ ಕೃಷಿ ಯಂತ್ರಗಳು ರೈತರಿಗೆ, ಕೃಷಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ, ಸಮಸ್ಯೆಗೆ ಪರಿಹಾರ ಸೂಚಿಸುವ ಸಾಧನಗಳು.
ಬಾಲ್ಯದಿಂದಲೇ ಹೊಸತನದ ಹುಡುಕಾಟಕ್ಕೆ ಬಿದ್ದ ಅಬ್ದುಲ್ ಖಾದರ್, ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿಯಲ್ಲಿ ಹೊಸ ಆವಿμÁ್ಕರಗಳನ್ನು ಮಾಡುತ್ತಿದ್ದಾರೆ. ಕೃಷಿ ಕೆಲಸಗಳನ್ನು ಸುಲಭ ಮಾಡಿದ ಇವರ ಪ್ರಯತ್ನಕ್ಕೆ ‘ಕೃಷಿ ಅನ್ವೇಷಕ’ಗಳಂತಹ ಪ್ರಶಸ್ತಿಗಳು ಹುಡುಕಿಕೊಂಡು ಬಂದು ಗೌರವಿಸಿವೆ.
60 ಎಕರೆ ಕೃಷಿ ಭೂಮಿ ಹೊಂದಿದ್ದ ಇಮಾಮ್ಸಾಬ್ ಅಪ್ಪಟ ಕೃಷಿಕ. ಇವರ ಒಬ್ಬನೇ ಮಗ ಅಬ್ದುಲ್ ಖಾದರ್. ಪದವಿ ಪಡೆದು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದು ಇಷ್ಟವಿಲ್ಲದೆ ಕೃಷಿ ಯಂತ್ರೋಪಕರಣಗಳ ತಯಾರಿಗೆ ಮುಂದಾದರು.
ಖಾದರ್ ಕಂಡುಹಿಡಿದ ನಡಕಟ್ಟಿನ ಕೂರಗಿ ಜನಪ್ರಿಯತೆ ಪಡೆಯಿತು. 2004ರಿಂದ ಇಲ್ಲಿಯವರೆಗೆ 7250 ಕೂರಿಗೆಗಳನ್ನು ಇವರು ಮಾರಾಟ ಮಾಡಿದ್ದಾರೆ. ಇದರಿಂದ ದೇಶಕ್ಕೆ 748 ಕೋಟಿ ಹಣ ಉಳಿತಾಯವಾಗಿದೆ ಎನ್ನುವುದು ಅವರ ಲೆಕ್ಕಾಚಾರ. ಇದಾದ ನಂತರ ರೊಟೊವೇಟರ್, ಗೊಬ್ಬರ ಹಾಕುವುದು, ಬೀಜ ಬಿತ್ತುವುದು, ಎಡೆ ಹೊಡೆಯು ವುದು, ಔಷಧ ಸಿಂಪಡಿಸುವುದು ಹಾಗೂ ಭೂಮಿ ಹಸಿ ಇರುವಾಗಲೇ ಹುಲ್ಲು ತಿರುವಿ ಹಾಕುವಂತಹ ಐದು ಕೆಲಸವನ್ನು ಒಂದೇ ಯಂತ್ರ ಮಾಡುವ ಸಾಧನಗಳನ್ನೂ ಕಂಡುಹಿಡಿದರು.
ಹುಬ್ಬಳ್ಳಿಯಲ್ಲಿ ಬಿಡಿ ಭಾಗ ತಯಾರಿಕಾ ಘಟಕ ಹಾಗೂ ಅಣ್ಣಿಗೇರಿಯಲ್ಲಿ ಅವುಗಳನ್ನು ಜೋಡಿಸುವ ಘಟಕ ಸ್ಥಾಪಿಸಿದ್ದಾರೆ. 130 ಜನಕ್ಕೆ ಉದ್ಯೋಗ ನೀಡಿದ್ದಾರೆ. ಇದೀಗ ಈ ಕೇಂದ್ರವೇ ಈ ಊರಿನ ಪ್ರತಿಷ್ಠೆಯಾಗಿದೆ. ಇಷ್ಟು ಮಾತ್ರವಲ್ಲ ಕೂರಿಗೆ ಅಳವಡಿಸುವ ಆ ಸ್ಪಂಜ್ ನಿರ್ಮಾಣಕ್ಕೆ ಪೇಟೆಂಟ್ ಕೂಡಾ ಸಾಧಕ ಎಂಬ ಖ್ಯಾತಿಗೆ ಒಳಗಾದವರು.
#PadmaAwards pic.twitter.com/EgK6cppQz9
— DD News (@DDNewslive) January 25, 2022







