ಬಿಜೆಪಿ ಬಿಟ್ಟು ಮನೆಗೆ ಹೋಗುತ್ತೇನೆಯೇ ಹೊರತು, ಬೇರೆ ಪಕ್ಷಕ್ಕೆ ಹೋಗುವುದಿಲ್ಲ: ಸಚಿವ ಎಂ.ಟಿ.ಬಿ.ನಾಗರಾಜ್

ಬೆಂಗಳೂರು, ಜ.25: ಕಾಂಗ್ರೆಸ್ ಪಕ್ಷದ ಯಾವ ನಾಯಕರ ಜೊತೆಯೂ ನಾನು ಚರ್ಚೆ ಮಾಡಿಲ್ಲ. ಬಿಜೆಪಿ ಬಿಟ್ಟು ಮನೆಗೆ ಹೋಗುತ್ತೇನೆಯೇ ಹೊರತು, ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಸ್ಪಷ್ಟಪಡಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದಲ್ಲಿದ್ದು, ಈ ಪಕ್ಷದಲ್ಲೆ ಮುಂದುವರೆಯುತ್ತೇನೆ. ಜನರ ಸೇವೆ ಮಾಡುತ್ತೇನೆ. ಬೇರೆ ಪಕ್ಷಕ್ಕೆ ಹೋಗುವಂತಹ ಅಗತ್ಯ ನನಗಿಲ್ಲ ಎಂದರು.
ಬಿಜೆಪಿಯ ಕೆಲವು ಶಾಸಕರು, ಸಚಿವರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಇರಬಹುದು. ಆದರೆ, ನನಗೆ ಅದರ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ ಬಾದಾಮಿಯಿಂದ ನನಗೆ ದೂರವಾಣಿ ಕರೆ ಮಾಡಿ, ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿದರು. ಅವರ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಿದ್ದೇನೆಯೇ ಹೊರತು, ಬೇರೆ ಯಾವುದೆ ರಾಜಕೀಯ ವಿಚಾರಗಳ ಬಗ್ಗೆ ನಮ್ಮ ನಡುವೆ ಚರ್ಚೆ ನಡೆದಿಲ್ಲ ಎಂದು ನಾಗರಾಜ್ ಹೇಳಿದರು.
ಜಿಲ್ಲಾ ಉಸ್ತುವಾರಿ ಬದಲಾವಣೆಗೆ ಕಾರಣ ಗೊತ್ತಿಲ್ಲ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕೋವಿಡ್ ಉಸ್ತುವಾರಿಯಾಗಿ ನನಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜವಾಬ್ದಾರಿ ನೀಡಿದ್ದರು. ಸುಧಾಕರ್‍ಗೆ ಚಿಕ್ಕಬಳ್ಳಾಪುರ ಉಸ್ತುವಾರಿ ನೀಡಲಾಗಿತ್ತು. ಈಗ ಸುಧಾಕರ್‍ಗೆ ಬೆಂಗಳೂರು ಗ್ರಾಮಾಂತರ ಹಾಗೂ ನನಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಈ ಬದಲಾವಣೆಗೆ ಕಾರಣವೇನು ಅನ್ನೋದು ಗೊತ್ತಿಲ್ಲ ಎಂದು ಅವರು ತಿಳಿಸಿದರು.
ಈ ರೀತಿ ಬದಲಾವಣೆ ಆಗುತ್ತೆ ಅಂತಾ ನಿರೀಕ್ಷೆ ಇರಲಿಲ್ಲ. ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಾಲೂಕು ಅಭಿವೃದ್ಧಿ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಹೈಕಮಾಂಡ್ ನಿರ್ಧಾರದಂತೆ ಉಸ್ತುವಾರಿಗಳ ಬದಲಾವಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ನನಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾಗರಾಜ್ ಹೇಳಿದರು.







