ಗ್ರಾಮ ಒನ್ನಿಂದ ಗ್ರಾಮೀಣ ಜನತೆಗೆ ಸುಲಭದಲ್ಲಿ ಸರಕಾರಿ ಸೇವೆ: ಉಸ್ತುವಾರಿ ಸಚಿ ಎಸ್.ಅಂಗಾರ
ಉಡುಪಿ, ಜ.26: ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳಿಗೆ ಗ್ರಾಮೀಣ ಜನತೆ ನಗರ ಪ್ರದೇಶಕ್ಕೆ ಬರುವ ಅಗತ್ಯವಿರದೇ ತಮ್ಮ ಗ್ರಾಮದಲ್ಲಿಯೇ ಅತ್ಯಂತ ಸುಲಭವಾಗಿ ಅಗತ್ಯವಿರುವ ಹಲವಾರು ಸರಕಾರಿ ಸೇವೆಗಳನ್ನು ‘ಗ್ರಾಮ ಒನ್’ ಕೇಂದ್ರಗಳ ಮೂಲಕ ಪಡೆಯಬಹುದು ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಬುಧವಾರ ಉದ್ಯಾವರ ಗ್ರಾಮಪಂಚಾಯತ್ನಲ್ಲಿ ನೂತನವಾಗಿ ಪ್ರಾರಂಭ ಗೊಂಡ ‘ಗ್ರಾಮ ಒನ್’ ಕೇಂದ್ರವನ್ನು ಉದ್ಘಾಟಿಸಿ, ಮುಖ್ಯಮಂತ್ರಿಗಳೊಂದಿಗೆ ನಡೆದ ವರ್ಚುವಲ್ ಕಾರ್ಯಕ್ರಮದ ಬಳಿಕ ಅವರು ಮಾತನಾಡುತಿದ್ದರು.
ಗ್ರಾಮೀಣ ಜನತೆ ವಿವಿಧ ಸರಕಾರಿ ಸೌಲಭ್ಯಗಳನ್ನು ಪಡೆಯಲು ಅಗತ್ಯ ವಿರುವ ದಾಖಲೆಗಳಿಗಾಗಿ ದೂರದ ಊರುಗಳಿಂದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ದಾಖಲೆಗಳನ್ನು ಪಡೆಯಲು ಕಷ್ಟಪಡಬೇಕಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ಗ್ರಾಮ ಒನ್ ಕೇಂದ್ರಗಳನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಆರಂಭಿಸಲು ಸೂಚಿಸಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿ 105 ಗ್ರಾಮಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದರು.
ಗ್ರಾಮ ಒನ್ ಕೇಂದ್ರಗಳಲ್ಲಿ ಸರಕಾರದ ವಿವಿಧ 48 ಇಲಾಖೆಗಳ ಸೇವಾ ಸಿಂಧುವಿನ 750ಕ್ಕೂ ಹೆಚ್ಚಿನ ಸೇವೆ, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಸೇವೆ, ಇ-ಸ್ಟಾಂಪಿಂಗ್, ಬ್ಯಾಂಕಿಂಗ್ ಸೇವೆ, ಸಕಾಲ, ಮಾಹಿತಿ ಹಕ್ಕು ಅಧಿನಿಯಮ ಇನ್ನಿತರ ಸೇವಾ ಸೌಲಭ್ಯಗಳು ದೊರೆಯಲಿವೆ. ಮುಂದಿನ ದಿನಗಳಲ್ಲಿ ಆಧಾರ್ ಕೇಂದ್ರದ ಸೇವೆಗಳು ಸಹ ಇಲ್ಲಿ ದೊರೆಯಲಿದ್ದು, ಸಾರ್ವಜನಿಕರು ಈ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳುಂತೆ ಸಚಿವರು ಮನವಿ ಮಾಡಿದರು.
ಮುಖ್ಯಮಂತ್ರಿ ಉದ್ಘಾಟನೆ: ವರ್ಚುವಲ್ ಸಭೆಯ ಮೂಲಕ ಬೆಂಗಳೂರಿ ನಿಂದ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ರಾಮೀಣ ಪ್ರದೇಶಗಳ ಜನತೆ ಯಾವುದೇ ಮಧ್ಯವರ್ತಿಗಳ ನೆರವಿಲ್ಲದೇ ಅತ್ಯಂತ ಸುಲಭವಾಗಿ ತಮ್ಮ ಗ್ರಾಮಗಳಲ್ಲಿಯೇ ಅಗತ್ಯ ಸರಕಾರಿ ದಾಖಲೆಗಳನ್ನು ಕಡಿಮೆ ಖರ್ಚಿನಲ್ಲಿ ಮತ್ತು ಅತ್ಯಂತ ತ್ವರಿತವಾಗಿ ಗ್ರಾಮ ಒನ್ ಕೇಂದ್ರಗಳ ಮೂಲಕ ಪಡೆಯಬಹುದಾಗಿದೆ ಎಂದರು.
ಈಗಾಗಲೇ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಿದ್ದ 4 ಜಿಲ್ಲೆಗಳಲ್ಲಿ 6ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಇಂದಿನಿಂದ ರಾಜ್ಯದ 12 ಜಿಲ್ಲೆಗಳ 3000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಪ್ರಾರಂಭಗೊಳ್ಳಲಿವೆ. ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಈ ಕೇಂದ್ರಗಳ ಸಮರ್ಪಕ ಕಾರ್ಯನಿರ್ವಹಣೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಎಲ್ಲಾ ಸಚಿವರು ತಮ್ಮ ಪ್ರವಾಸದ ಸಂದರ್ಭಗಳಲ್ಲಿ ಈ ಕೇಂದ್ರಗಳಿಗೆ ಭೇಟಿ ನೀಡಿ ಅದರ ಕಾರ್ಯವೈಖರಿಯನ್ನು ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯದಲ್ಲಿ ಪ್ರಪ್ರಥಮವಾಗಿ ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮಪಂಚಾಯತ್ನ ಗ್ರಾಮ ಒನ್ ಕೇಂದ್ರದಲ್ಲಿ ಆರ್ಟಿಸಿ ಪತ್ರವನ್ನು ಗ್ರಾಮಸ್ಥರಿಗೆ ಸಚಿವ ಅಂಗಾರ ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉದ್ಯಾವರ ಗ್ರಾಪಂ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ ಸಿಇಓ ಡಾ. ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.