ಯಕ್ಷಗಾನ ಕಲಾವಿದ ಬೇತಕುಂಞಿ ಕುಲಾಲ ನಿಧನ

ಉಡುಪಿ, ಜ.26: ಹಿರಿಯ ಯಕ್ಷಗಾನ ಕಲಾವಿದ ಬೇತಕುಂಞಿ ಕುಲಾಲ (79) ಬುಧವಾರ ಬಂಟ್ವಾಳ ತಾಲೂಕಿನ ಮಿತ್ತನ್ಕದ ಸ್ವಗೃಹದಲ್ಲಿ ನಿಧನರಾದರು.
ಬಾಲ್ಯದಲ್ಲಿಯೇ ಯಕ್ಷಗಾನದಿಂದ ಆರ್ಕಷಿತರಾದ ಕುಲಾಲ್, ಕುರಿಯ ವಿಠಲ ಶಾಸ್ತ್ರಿಗಳಲ್ಲಿ ನಾಟ್ಯಾಭ್ಯಾಸ ಮಾಡಿದ್ದರು. ಧರ್ಮಸ್ಥಳ, ಮುಲ್ಕಿ, ಸೌಕೂರು, ಕುತ್ಯಾಳ, ಸುಬ್ರಹ್ಮಣ್ಯ, ಕೂಡ್ಲು ಮೇಳಗಳಲ್ಲಿ ಸೇವೆ ಸಲ್ಲಿಸಿ ಸುಂಕದಕಟ್ಟೆ ಮೇಳದಲ್ಲಿ ಸುದೀರ್ಘ 33 ವರ್ಷ ತಿರುಗಾಟ ನಡೆಸಿದ್ದರು. ಒಟ್ಟು ನಾಲ್ಕೂವರೆ ದಕಗಳ ಕಾಲ ಕಲಾಸೇವೆಗೈದಿದ್ದಾರೆ.
ಸ್ತ್ರೀವೇಷ ಹಾಗೂ ಪುರುಷ ಪಾತ್ರಗಳಲ್ಲಿ ಸಮಾನ ಸಿದ್ಧಿ ಪಡೆದ ಇವರು ದೇವೇಂದ್ರನ ಪಾತ್ರದಲ್ಲಿ ವಿಶೇಷ ಪ್ರಸಿದ್ಧಿ ಪಡೆದಿದ್ದರು. ತುಳು ಮತ್ತು ಕನ್ನಡ ಯಕ್ಷಗಾನದಲ್ಲಿ ತಮ್ಮ ಕಲಾಪ್ರೌಢಿಮೆ, ಮಾತುಗಾರಿಕೆ ಮೆರೆದಿದ್ದರು. ಮೊನ್ನೆ ನಿಧನರಾದ ಮುಳಿಯಾಲು ಭೀಮ ಭಟ್ಟರೊಂದಿಗೆ ದೀರ್ಘ ಕಾಲ ಯಕ್ಷಗಾನ ತಿರುಗಾಟ ಮಾಡಿದ್ದರು.
ಇವರು ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.