ಕಳಸ: ರಾಜಕಾರಣಿಗಳ ಕೆಸರೆರಚಾಟಕ್ಕೆ ವೇದಿಕೆಯಾದ ಗಣರಾಜ್ಯೋತ್ಸವ ಕಾರ್ಯಕ್ರಮ

ಕಳಸ, ಜ.26: ನೂತನ ತಾಲೂಕು ಘೋಷಣೆ ಬಳಿಕ ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮ ರಾಜಕಾರಣಿಗಳ ಕೆಸರೆರಚಾಟಕ್ಕೆ ವೇದಿಕೆಯಾದ ಘಟನೆ ಬುಧವಾರ ನಡೆದಿದೆ.
ನೂತನ ತಾಲೂಕು ರಚನೆಯಾದ ಮೇಲೆ ಮೊದಲ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಳ್ಳಲು ಪಟ್ಟಣದ ನಾಡಕಚೇರಿ ಆವರಣದಲ್ಲಿ ನಿರ್ಮಿಸಲಾಗಿದ್ದ ವೇದಿಕೆ ಎದುರು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಬೇಕಿದ್ದ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ತಡವಾಗಿ ಆಗಮಿಸಿದ್ದರಿಂದ ಕಂದಾಯ ಇಲಾಖೆ ಹಿರಿಯ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಇದನ್ನೂ ಓದಿ: ಅಂಬೇಡ್ಕರ್ ಫೋಟೊ ತೆರವುಗೊಳಿಸಿದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆಂದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ!
ಕೆಲ ಹೊತ್ತಿನ ಬಳಿಕ ಕಾರ್ಯಕ್ರಮಕ್ಕಾಗಮಿಸಿದ ಶಾಸಕ ಕುಮಾರಸ್ವಾಮಿ ಅಧ್ಯಕ್ಷೀಯ ಭಾಷಣ ನೆರವೇರಿಸಿದರು. ನಂತರ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡ ವೆಂಕಟ್‍ಸುಬ್ಬಯ್ಯ ಮಾತನಾಡಿ, ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರನ್ನು ಕೊಂಡಾಡಿದ್ದಲ್ಲದೇ, ಕಳಸ ತಾಲೂಕು ಘೋಷಣೆ ಮಾಡಿದ್ದು ಬಿಜೆಪಿ ಸರಕಾರ, ಭದ್ರಾ ಮೇಲ್ಡಂಡೆ ಯೋಜನೆಯಿಂದ ಕಳಸ ಪಟ್ಟಣ ಮುಳುಗಡೆಯಾಗುತ್ತಿತ್ತು. ಈ ಯೋಜನೆಯನ್ನು ಬಿಜೆಪಿ ಸರಕಾರ ರದ್ದು ಮಾಡಿದ್ದರಿಂದ ಕಳಸ ಜನತೆ ಬದುಕುವಂತಾಗಿದೆ ಎಂದು ಹೇಳಿಕೆ ನೀಡಿದರು.
ಈ ವೇಳೆ ವೇದಿಕೆಯಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ವೆಂಕಟಸುಬ್ಬಯ್ಯ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, ಕಳಸ ತಾಲೂಕು ಘೋಷಣೆ ಮಾಡಿದ್ದು ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ, ಭದ್ರಾ ಮೇಲ್ದಂಡೆ ಯೋಜನೆ ರದ್ದು ಗೊಳಿಸಿದ್ದು ಧರ್ಮಸಿಂಗ್ ಸರಕಾರ ಎಂಬುದು ಕಳಸದ ಜನರಿಗೆ ತಿಳಿದಿದೆ. ಆದರೆ ಬಿಜೆಪಿ ಮುಖಂಡರು ಸುಳ್ಳು ಹೇಳುವ ಮೂಲಕ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಶಾಸಕ ಕುಮಾರಸ್ವಾಮಿ, ಹಾಗೂ ಎಸಿ ನಾಗರಾಜ್ ಮುಂದೆಯೇ ಬಿಜೆಪಿ ಮುಖಂಡರು ಹಾಗೂ ಕಾಂಗ್ರೆಸ್, ಜೆಡಿಎಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ವೇದಿಕೆ ಮುಂದೆಯೇ ಎದ್ದು ಬಂದ ಮುಖಂಡರು ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು. ಈ ವೇಳೆ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಒಂದು ಹಂತದಲ್ಲಿ ಮುಖಂಡರು ಪರಸ್ಪರ ಕೈಕೈ ಮಿಲಾಯಿಸುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರಾದರೂ ವಾಗ್ವಾದ ಮುಂದುವರಿದಿತ್ತು. ಈ ವೇಳೆ ಮೈಕ್ ಆಫ್ ಮಾಡಿ ಬಿಜೆಪಿ ಮುಖಂಡರಿಗೆ ಮಾತನಾಡಲು ಅವಕಾಶ ನೀಡದೇ ಕಾಂಗ್ರೆಸ್, ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಒಳ್ಳೆಯ ಸಂದೇಶವನ್ನು ನೀಡಬೇಕಾಗಿದ್ದ ರಾಜಕೀಯ ಪಕ್ಷಗಳ ಮುಖಂಡರು ಉತ್ಸವದ ವೇದಿಕೆಯನ್ನು ಆರೋಪ ಪ್ರತ್ಯಾರೋಪಕ್ಕೆ ಬಳಸಿಕೊಂಡ ಘಟನೆಯನ್ನು ಕಂಡ ಸ್ಥಳೀಯರು ಈ ವೇಳೆ ಅಸಮಾಧಾನ ಹೊರಹಾಕಿದರು. ತಡವಾಗಿ ಆಗಮಿಸಿ ಸಾರ್ವಜನಿಕರು, ಶಾಲಾ ಮಕ್ಕಳನ್ನು ಬಿಸಿಲಿನಲ್ಲಿ ಕಾಯುವಂತೆ ಮಾಡಿದ ಶಾಸಕ ಕುಮಾರಸ್ವಾಮಿ ವಿರುದ್ಧವೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.







