ಭಾರತೀಯ ಕ್ರಿಕೆಟ್ ಏಕದಿನ ತಂಡದಲ್ಲಿ ಹೊಸ ಮುಖಗಳಿಗೆ ಮಣೆ
ಭುವನೇಶ್ವರ್ಗೆ ಕೊಕ್

ಫೈಲ್ ಫೋಟೊ
ಚೆನ್ನೈ: ಫೆಬ್ರುವರಿ 6ರಿಂದ ಅಹ್ಮದಾಬಾದ್ನಲ್ಲಿ ಆರಂಭವಾಗಲಿರುವ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯಕ್ಕೆ 18 ಮಂದಿ ಆಟಗಾರರ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ಭುವನೇಶ್ವರ್ ಕುಮಾರ್ ಅವರಿಗೆ ಕೊಕ್ ನೀಡಿ, ದೀಪಕ್ ಹೂಡಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ರಾಜಸ್ಥಾನದ 21 ವರ್ಷ ವಯಸ್ಸಿನ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಮೊಟ್ಟಮೊದಲ ಬಾರಿಗೆ ರೋಹಿತ್ ಶರ್ಮಾ ನೇತೃತ್ವದ ಏಕದಿನ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನೂ ಆಯ್ಕೆಗಾರರು ಪರಿಗಣಿಸಿದ್ದಾರೆ. ಪಂದ್ಯಗಳ ಒತ್ತಡದ ಹಿನ್ನೆಲೆಯಲ್ಲಿ ಜಸ್ಪ್ರೀತ್ ಬೂಮ್ರಾ ಮತ್ತು ಮೊಹ್ಮದ್ ಶಮಿ ಅವರಿಗೆ ಸರಣಿಯ ಮಟ್ಟಿಗೆ ವಿಶ್ರಾಂತಿ ನೀಡಲಾಗಿದ್ದು, ಫೆಬ್ರುವರಿ ಕೊನೆಯ ವೇಳೆಗೆ ನಡೆಯುವ ಶ್ರೀಲಂಕಾ ವಿರುದ್ಧದ ಪಂದ್ಯಗಳಿಗೆ ಅವರು ಲಭ್ಯರಾಗಲಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಆಡಿದ ತಂಡದಿಂದ ಆರ್.ಅಶ್ವಿನ್ ಮತ್ತು ವೆಂಕಟೇಶ್ ಅಯ್ಯರ್ ಅವರನ್ನು ಕೈಬಿಡಲಾಗಿದೆ. ಆದಾಗ್ಯೂ ಅವರು ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡದ ವ್ಯವಸ್ಥಾಪಕರಿಂದ ಅಭಿಪ್ರಾಯ ಪಡೆದು 50 ಓವರ್ಗಳ ಪಂದ್ಯಕ್ಕೆ ಆರ್ರೌಂಡರ್ನ ಅಗತ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಹೊಸಬರಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ.
ಹಿಮಾಚಲ ಪ್ರದೇಶದ ಋಷಿ ಧವನ್ ಮತ್ತು ತಮಿಳುನಾಡಿನ ಶಾರೂಖ್ ಖಾನ್ ಅವರ ಹೆಸರು ಕ್ರಮವಾಗಿ ಏಕದಿನ ಹಾಗೂ ಟಿ20 ತಂಡಕ್ಕೆ ಪರಿಗಣಿಸಲ್ಪಟ್ಟರೂ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ಇಬ್ಬರ ಬದಲಾಗಿ ಹೂಡಾ ಮತ್ತು ಕುಲದೀಪ್ ಅವರ ಆಯ್ಕೆ ಅಚ್ಚರಿ ಮೂಡಿಸಿದೆ. ನಿರೀಕ್ಷೆಯಂತೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ತೋರಿದ ಭುವನೇಶ್ವರ ಕುಮಾರ್ ಸ್ಥಾನ ಕಳೆದುಕೊಂಡಿದ್ದಾರೆ. ಅವರ ಜಾಗಕ್ಕೆ ದೀಪಕ್ ಚಹರ್ ಸೇರ್ಪಡೆಯಾಗಿದ್ದಾರೆ.
ಉಳಿದಂತೆ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಆವೇಶ್ ಖಾನ್ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ಮರಳಿದ್ದಾರೆ. ಏತನ್ಮಧ್ಯೆ ಉಪನಾಯಕ ಕೆ.ಎಲ್.ರಾಹುಲ್ ಅವರು ಮೊದಲ ಏಕದಿನ ಪಂದ್ಯಕ್ಕೆ ಲಭ್ಯ ಇರುವುದಿಲ್ಲ.