ಕೊಹ್ಲಿಯಿಂದ ತೆರವಾದ ಟೆಸ್ಟ್ ನಾಯಕತ್ವಕ್ಕೆ ಉತ್ತರಾಧಿಕಾರಿ ಹೆಸರಿಸಿದ ಹರ್ಭಜನ್ ಸಿಂಗ್

ಹೊಸದಿಲ್ಲಿ: ಟೀಮ್ ಇಂಡಿಯಾವು ದಕ್ಷಿಣ ಆಫ್ರಿಕಾದಲ್ಲಿ ಈ ತಿಂಗಳ ಆರಂಭದಲ್ಲಿ 1-2 ಅಂತರದ ಸರಣಿ ಸೋತ ನಂತರ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆ ನಂತರ ಬಿಸಿಸಿಐ ಇನ್ನೂ ಭಾರತದ ಮುಂದಿನ ಟೆಸ್ಟ್ ನಾಯಕನನ್ನು ಘೋಷಿಸಿಲ್ಲ. ರೋಹಿತ್ ಶರ್ಮಾ ಅವರು ಟೆಸ್ಟ್ನಲ್ಲಿ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಅವರು ಡಿಸೆಂಬರ್ನಲ್ಲಿ ಅಜಿಂಕ್ಯ ರಹಾನೆ ಬದಲಿಗೆ ಉಪನಾಯಕರಾಗಿ ಆಯ್ಕೆಯಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಮತ್ತು ಏಕದಿನ ನಾಯಕತ್ವಕ್ಕೆ ಪದಾರ್ಪಣೆ ಮಾಡಿದ ಕೆ.ಎಲ್. ರಾಹುಲ್ ಅವರನ್ನೂ ಟೆಸ್ಟ್ ನಾಯಕತ್ವದ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.
ಭಾರತದ ಮುಂದಿನ ಟೆಸ್ಟ್ ನಾಯಕನ ಬಗ್ಗೆ ಮಾತನಾಡಿದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ವಿಭಿನ್ನ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.
ಭಾರತವನ್ನು ಎಲ್ಲಾ ಮೂರು ಪ್ರಕಾರದ ಕ್ರಿಕೆಟ್ ನಲ್ಲಿ ಮುನ್ನಡೆಸಲು ರೋಹಿತ್ ಅವರನ್ನು ಬೆಂಬಲಿಸಿದ ಹರ್ಭಜನ್, ಆದರೆ ರೋಹಿತ್ ಎಲ್ಲಾ ಪ್ರಕಾರದ ಕ್ರಿಕೆಟಿಗೆ ಲಭ್ಯವಿಲ್ಲದಿದ್ದರೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವನ್ನು ಮುನ್ನಡೆಸಲು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಅವಕಾಶ ನೀಡಬೇಕೆಂದು ಕರೆ ನೀಡಿದರು.
"ನನ್ನ ಪ್ರಕಾರ, ರೋಹಿತ್ ಶರ್ಮಾ ಸಂಪೂರ್ಣವಾಗಿ ಫಿಟ್ ಆಗಿದ್ದರೆ ಎಲ್ಲಾ ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕನಾಗಿರಬೇಕು" ಎಂದು ಹರ್ಭಜನ್ ಸ್ಪೋರ್ಟ್ಸ್ ಟಾಕ್ಗೆ ತಿಳಿಸಿದರು.
ರೋಹಿತ್ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ಪರಿಗಣಿಸಬಹುದು ಎಂದಿರುವ ಹರ್ಭಜನ್, ತಮ್ಮ ಹೇಳಿಕೆಯನ್ನು ಸಮರ್ಥಿಸಲು 1983 ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರ ಉದಾಹರಣೆ ನೀಡಿದರು.
“ಕಪಿಲ್ ದೇವ್ ಕೂಡ ಬೌಲರ್ ಆಗಿದ್ದರು. ಬೌಲರ್ ಏಕೆ ನಾಯಕನಾಗಬಾರದು? ನಾನು ಇದನ್ನು ತಿಳಿದುಕೊಳ್ಳಲು ಬಯಸುತ್ತೇನೆ" ಎಂದು ಹರ್ಭಜನ್ ಹೇಳಿದರು







