ಶಾಲಾ ಕಟ್ಟಡ ನೆಲಸಮ: ಪೊಲೀಸ್ ಠಾಣೆಗೆ ದೂರು ನೀಡಿದ ಬಿಇಒ

ಆನೇಕಲ್, ಜ.26: ತಾಲೂಕಿನ ಕಸಬಾ ಹೋಬಳಿಯ ಹೊನ್ನಕಳಸಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಒಂದು ತಿಂಗಳ ಹಿಂದೆ ಧ್ವಂಸಗೊಳಿಸಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
1997ರಲ್ಲಿ ಕಾಮಯ್ಯ ಮತ್ತವರ ಪತ್ನಿ ನಾಗಮ್ಮ ಎಂಬವರು ಶಾಲೆಗೆ ದಾನವಾಗಿ ಈ ಜಮೀನನ್ನು ನೀಡಿದ್ದರು. ಆದರೆ ಅವರ ಮಗಳು ಪಾರ್ವತಮ್ಮ ಶಾಲೆಯನ್ನು ದ್ವಂಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಸ್ವತಃ ಪಾರ್ವತಮ್ಮ ಮಾಧ್ಯಮದಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದರೂ ಕ್ರಮವಹಿಸದ ಅಧಿಕಾರಿಗಳ ನಡೆ ಕುರಿತು ಸಾರ್ವಜನಿಕ ವಲಯದಲ್ಲಿ ಶಂಕೆ ವ್ಯಕ್ತವಾಗುತ್ತಿದೆ. ಈ ವಿಚಾರ ದ್ವಂಸಕ್ಕೂ ಮುನ್ನ ಶಿಕ್ಷಣ ಇಲಾಖೆ ಮತ್ತು ಗ್ರಾಮಪಂಚಾಯತ್‌ನ ಯಾರ ಗಮನಕ್ಕೂ ತಾರದೆ ನೆಲಸಮಗೊಳಿಸಿರುವುದು ತಾಲೂಕು ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಸಾಕ್ಷಿಯಾಗಿದೆ ಎಂದು ದಸಂಸ ಪರಿವರ್ತನಾವಾದದ ರಾಜ್ಯ ಸಂಚಾಲಕ ಆರೋಪಿಸಿದ್ದಾರೆ.
ಚಂದಾಪುರ, ಜಿಗಣಿ ಪುರಸಭೆ ಮತ್ತು ಹೆಬ್ಬಗೋಡಿ ನಗರಸಭೆಯ ಚುನಾವಣೆ ಸಂದರ್ಭವನ್ನು ಬಳಸಿಕೊಂಡು ಶಾಲೆಯನ್ನು ದ್ವಂಸಗೊಳಿಸಿದ್ದಾರೆ ಎಂದು ಶಾಲಾ ಶಿಕ್ಷಕ ಭಾಸ್ಕರ್ ಆರೋಪಿಸಿದ್ದಾರೆ.
ಶಾಲೆಯ ದಾನಪತ್ರವನ್ನು ನಾಶಪಡಿಸಲಾಗಿತು ಎನ್ನಲಾಗಿದ್ದು, 2010-11ರಲ್ಲಿ ಸುರಗಜಕ್ಕನಹಳ್ಳಿ ಗ್ರಾಪಂನ ದಾಖಲೆಯಂತೆ ನಮೂನೆ 9-11ರಂತೆ ಸರಕಾರಿ ಶಾಲೆ ಎಂದು ನಮೂದಾಗಿದೆ. ಶಾಲೆಗೆ ಇಲೆಕ್ಟ್ರಿಕ್ ಬಿಲ್ ಸಹ ಇದೆ. ಊರಿನ ಬಡ ಮಕ್ಕಳು ಇಲ್ಲಿ ಓದಿ ವಿದ್ಯಾವಂತರಾಗಿದ್ದಾರೆ. ಆದಾಗ್ಯೂ ಶಾಲೆಯನ್ನು ದ್ವಂಸಗೊಳಿಸಿದ್ದಾರೆ ಎಂದು ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲಾ ಕಟ್ಟಡ ದ್ವಂಸಗೊಳಿಸುವ ಮುನ್ನ ಕಾಮಯ್ಯನ ಮಕ್ಕಳು ಪ್ರಸ್ತಾಪಿಸದೆ ಚುನಾವಣಾ ಸಂಧರ್ಭವನ್ನು ಬಳಸಿಕೊಂಡು ಶಾಲೆ ಕೆಡವಿರುವುದು ಅಕ್ಷಮ್ಯ. ಈ ಬಗ್ಗೆ ಜ.11ರಂದು ವೃತ್ತ ನಿರೀಕ್ಷಕರಿಗೆ ಕ್ರಮವಹಿಸುವಂತೆ ದೂರು ನೀಡಲಾಗಿದೆ. ಈವರೆಗೆ ಕ್ರಮ ಕೈಗೊಂಡಿಲ್ಲ.
ನರಸಿಂಹರಾಜು, ಆನೇಕಲ್ ಬಿಇಒ







