ಅಂಬೇಡ್ಕರ್ ಭಾವಚಿತ್ರ ತೆರವು: ನ್ಯಾಯಾಧೀಶರ ವಿರುದ್ಧ ರಾಯಚೂರು ಜಿಲ್ಲಾದ್ಯಂತ ಪ್ರತಿಭಟನೆ

ರಾಯಚೂರು, ಜ.27: ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸಿದ ರಾಯಚೂರಿನ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ನಡೆಯನ್ನು ವಿರೋಧಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಇಂದು ಜಿಲ್ಲಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ಸರಕಾರಿ ಬಸ್ ಸೇರಿದಂತೆ ವಾಹನಗಳ ಸಂಚಾರವೆಲ್ಲವೂ ಸ್ಥಗಿತಗೊಂಡಿದೆ. ಪ್ರಮುಖ ರಸ್ತೆಗಳಲ್ಲಿಯೇ ಪ್ರತಿಭಟನಾಕಾರರು ಕುಳಿತಿದ್ದು, ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಗಡೀಪಾರು ಮಾಡಬೇಕು ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.
ರಾಯಚೂರು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಡಾ.ಬಾಬು ಜಗಜೀವನರಾಂ ವೃತ್ತ, ಸಾತ್ ಮೈಲ್ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿವೆ.
ಸಿಂಧನೂರು, ದೇವದುರ್ಗ, ಮಾನ್ವಿ, ಲಿಂಗಸುಗೂರು, ಮಸ್ಕಿ ಹಾಗೂ ಸಿರವಾರ ಎಲ್ಲ ತಾಲ್ಲೂಕು ಕೇಂದ್ರಗಳು ಹಾಗೂ ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಘಟನೆ ವಿವರ: ಬುಧವಾರ ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಒಟ್ಟಿಗೆ ಇಟ್ಟು ಹೂಮಾಲೆ ಹಾಕಿ, ಪೂಜೆ ಮಾಡಿ ಪುಷ್ಪಾರ್ಚನೆ ಮತ್ತು ಧ್ವಜಾರೋಹಣಕ್ಕೆ ಸಿದ್ಧತೆ ಮಾಡಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಇಡಬೇಕೆಂದು ಯಾವುದೇ ಸೂಚನೆ, ಆದೇಶವಿಲ್ಲ. ಹೀಗಾಗಿ ಅಂಬೇಡ್ಕರ್ ಫೋಟೋ ತೆಗೆಯಬೇಕು ಎಂದು ಪಟ್ಟು ಹಿಡಿದು ತೆಗೆಸಿದ್ದರು.
ಅಂಬೇಡ್ಕರ್ ಫೋಟೋ ತೆರವುಗೊಳಿಸುವ ಮೂಲಕ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಉದ್ಧಟತನ ತೋರಿದ್ದರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







