ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ ಬೆನ್ನೆಲುಬು, ಅದನ್ನು ನಿರ್ಲಕ್ಷಿಸಬಾರದು: ರವಿ ಶಾಸ್ತ್ರಿ
ಸತತ 2ನೇ ವರ್ಷ ರಣಜಿ ಟ್ರೋಫಿ ಮುಂದೂಡಿದ ಬಿಸಿಸಿಐ

ಹೊಸದಿಲ್ಲಿ: ರಣಜಿ ಟ್ರೋಫಿಯನ್ನು ಸತತ ಎರಡನೇ ವರ್ಷ ರದ್ದುಪಡಿಸಲು ಅವಕಾಶ ನೀಡುವುದಿಲ್ಲ ಎಂಬ ಕೂಗಿಗೆ ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ದನಿಗೂಡಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಉನ್ನತ ಮಟ್ಟದ ಪ್ರಥಮ ದರ್ಜೆ ಪಂದ್ಯಾವಳಿಯನ್ನು ಮುಂದೂಡಲಾಗಿದೆ ಹಾಗೂ ರಣಜಿ ಟ್ರೋಫಿಯನ್ನು ಮರುನಿಗದಿಪಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒತ್ತಡಕ್ಕೆ ಸಿಲುಕಿದೆ.
"ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬು. ನೀವು ಅದನ್ನು ನಿರ್ಲಕ್ಷಿಸಲು ಆರಂಭಿಸಿದ ಕ್ಷಣ ನಮ್ಮ ಕ್ರಿಕೆಟ್ ಸ್ಪೈನ್‌ಲೆಸ್ ಆಗಿರುತ್ತದೆ!" ಶಾಸ್ತ್ರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಶಾಸ್ತ್ರಿ ಹಾಗೂ ಉಳಿದ ಭಾರತೀಯ ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರರನ್ನು ಆಯ್ಕೆ ಮಾಡಲು ಭಾರತಕ್ಕೆ ಪ್ರತಿಭೆಯನ್ನು ಒದಗಿಸಿದ್ದಕ್ಕಾಗಿ ರಣಜಿ ಟ್ರೋಫಿಯನ್ನು ಪದೇ ಪದೇ ಸ್ಮರಿಸುತ್ತಾರೆ.
ಸೌರಾಷ್ಟ್ರದ ನಾಯಕರಾಗಿರುವ ವೇಗದ ಬೌಲರ್ ಜಯದೇವ್ ಉನದ್ಕತ್ ಕೂಡ ರಣಜಿ ಟ್ರೋಫಿ ಟೂರ್ನಿಯನ್ನು ಮುಂದೂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು.
"ಸತತವಾಗಿ ಎರಡು ವರ್ಷಗಳು ದೊಡ್ಡ ನಷ್ಟವಾಗಿದೆ. ಒಂದು ವರ್ಷದಲ್ಲೇ ದೊಡ್ಡ ನಷ್ಟವಾಗಿದೆ. ಅಂತಿಮವಾಗಿ ಮುಂದೂಡುವ ಮೊದಲು ನಾವು ನಮ್ಮ ಪೂರ್ವ-ಋತುವಿನ ಶಿಬಿರವನ್ನು ಆರಂಭಿಸಿದಾಗ ಇದು ಸಂಪೂರ್ಣ ಹೊಸ ಆಟದಂತೆ ಭಾಸವಾಯಿತು" ಎಂದು ಉನದ್ಕತ್ ಪಿಟಿಐಗೆ ತಿಳಿಸಿದರು.